ನವದೆಹಲಿ: ಕೆನಡಾದಲ್ಲಿ ಖಲಿಸ್ತಾನಿಗಳ ಹಾರಾಟ ಮತ್ತೆ ಜೋರಾಗಿದೆ. ಟೊರೊಂಟೊದಲ್ಲಿ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ವಿರೋಧ ಪಕ್ಷದ ನಾಯಕ ಪಿಯರೆ ಪೊಲಿಯೆವ್ರೆ ಸಮ್ಮುಖದಲ್ಲಿ ಖಾಲ್ಸಾ ದಿವಸ್ ದಿನಾಚರಣೆ ವೇಳೆ ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗಲಾಗಿದೆ. ಈ ಘೋಷಣೆ ವಿರುದ್ಧ ಭಾರತ ಕೆನಡಾದ ಡೆಪ್ಯುಟಿ ಹೈಕಮಿಷನರ್ನ್ನು ಕರೆಸಿ ಪ್ರತಿಭಟನೆ ದಾಖಲಿಸಿದೆ.
ದೇಶದ ನಾಯಕರ ಕಾರ್ಯಕ್ರಮದಲ್ಲೇ ಖಲಿಸ್ತಾನ್ ಪರ ಘೋಷಣೆಗಳನ್ನು ಕೂಗುವುದನ್ನು ತೀವ್ರವಾಗಿ ಖಂಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತ - ಕೆನಡಾ ಸಂಬಂಧಗಳ ಮೇಲೆ ಪರಿಣಾಮ ಬೀರುವುದಲ್ಲದೇ, ಕೆನಡಾದಲ್ಲಿ ತನ್ನದೇ ದೇಶದ ನಾಗರಿಕರ ಮೇಲೆ ಹಾನಿಯಾಗುವಂತೆ ಹಿಂಸಾಚಾರ ಮತ್ತು ಅಪರಾಧದ ವಾತಾವರಣವನ್ನು ಉತ್ತೇಜಿಸುತ್ತದೆ ಎಂದು ಖಾರವಾಗಿ ಖಂಡಿಸಿದೆ.
ಅಲ್ಲದೇ, ಪ್ರಧಾನಿ ಭಾಷಣ ಮಾಡುವಾಗ ಘೋಷಣೆಗಳನ್ನು ಕೂಗಿದ್ದು ದೇಶದಲ್ಲಿ ಪ್ರತ್ಯೇಕತಾವಾದ, ಉಗ್ರವಾದ ಮತ್ತು ಹಿಂಸಾಚಾರಕ್ಕೆ ರಾಜಕೀಯ ಬೆಂಬಲ ನೀಡುತ್ತಿರುವುದನ್ನು ಮತ್ತೆ ಸಾಬೀತುಪಡಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆರೋಪಿಸಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತ ಈ ಬಗ್ಗೆ ಚರ್ಚಿಸಲು ವಿದೇಶಾಂಗ ಸಚಿವಾಲಯಕ್ಕೆ ಕೆನಡಾದ ಡೆಪ್ಯುಟಿ ಹೈಕಮಿಷನರ್ ಕರೆಯಿಸಿಕೊಂಡಿದೆ.
ಖಾಲ್ಸಾ ದಿವಸ್ ಆಚರಣೆಯ ವೀಡಿಯೊವನ್ನು ಕೆನಡಾ ಮೂಲದ ಸಿಪಿಎಸಿ ಟಿವಿ ಬಿಡುಗಡೆ ಮಾಡಿದ್ದು, ಅದರಲ್ಲಿ ಪಿಎಂ ಟ್ರುಡೊ ಅವರು ತಮ್ಮ ಭಾಷಣಕ್ಕಾಗಿ ವೇದಿಕೆಯನ್ನು ಹತ್ತುತ್ತಿದ್ದಂತೆ ಆರಂಭವಾದ 'ಖಲಿಸ್ತಾನಿ ಜಿಂದಾಬಾದ್' ಪರ ಘೋಷಣೆಗಳು ಅವರು ಭಾಷಣ ಆರಂಭಿಸುವವರೆಗೂ ಜೋರಾಗಿ ಕೇಳಿಬಂದಿವೆ.
2023ರಿಂದ ಆರಂಭವಾಯ್ತು ರಾಜತಾಂತ್ರಿಕ ಬಿಕ್ಕಟ್ಟು: ಕಳೆದ ಜೂನ್ನಲ್ಲಿ ಕೆನಡಾ ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಾಗಿತ್ತು. ಈ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಸರ್ಕಾರ ಆರೋಪಿಸಿತ್ತು. ಅಲ್ಲಿಂದ ಈ 2 ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಆರಂಭವಾಗಿ ಮತ್ತೆ ಸರಿಪಡಿಸಿಕೊಳ್ಳುವ ಪ್ರಯತ್ನವೂ ನಡೆದಿದೆ. ಈ ಮಧ್ಯೆ ಕೆನಡಾ ಮಾಡಿರುವ ಅಸಂಬದ್ಧ ಆರೋಪಗಳನ್ನೆಲ್ಲ ಭಾರತ ತಳ್ಳಿ ಹಾಕಿದೆ.
ಯಾರಿದು ಹರ್ದೀಪ್ ಸಿಂಗ್ ನಿಜ್ಜರ್?:ಹರ್ದೀಪ್ ಸಿಂಗ್ ನಿಜ್ಜರ್ ಖಲಿಸ್ತಾನಿ ನಾಯಕ. 2020 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಈತ ಭಯೋತ್ಪಾದಕ ಎಂದು ಘೋಷಿಸಲಾಯಿತು. ಈತನನ್ನು 2023 ಜೂನ್ 18ರಂದು ಸಂಜೆ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಗುರುದ್ವಾರದಿಂದ ಹೊರಬಂದಾಗ ಗುಂಡಿಕ್ಕಿ ಕೊಲ್ಲಲಾಯಿತು. 2024ರ ಮಾರ್ಚ್ನಲ್ಲಿ ನಿಜ್ಜರ್ನ ಹತ್ಯೆಯ ವಿಡಿಯೋ ಬಹಿರಂಗವಾಯಿತು. ನಿಜ್ಜರ್ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳು ಗುಂಡು ಹಾರಿಸಿರುವುದು ದೃಢವಾಗಿದ್ದು, ಇದು 'ಒಪ್ಪಂದದ ಹತ್ಯೆ' ಎಂದು ವಿವರಿಸಲಾಗಿದೆ.
ಇದನ್ನೂ ಓದಿ:ಸಂದೇಶಖಾಲಿ ಪ್ರಕರಣ: ಪ.ಬಂಗಾಳ ಸರ್ಕಾರ ಖಾಸಗಿ ವ್ಯಕ್ತಿಗಳ ಹಿತಾಸಕ್ತಿ ರಕ್ಷಣೆಗೆ ಮುಂದಾಗಿರುವುದೇಕೆ? ಸುಪ್ರೀಂ ಕೋರ್ಟ್ - Sandeshkhali Case