ನವದೆಹಲಿ: ಶ್ರೀ ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಒಪ್ಪಂದದ ಸಿಂಧುತ್ವವನ್ನು ಮತ್ತೆ ಐದು ವರ್ಷಗಳ ಅವಧಿಗೆ ವಿಸ್ತರಿಸಲು ಭಾರತ ಮತ್ತು ಪಾಕಿಸ್ತಾನ ಮಂಗಳವಾರ ನಿರ್ಧರಿಸಿವೆ. ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ.
ಪಾಕಿಸ್ತಾನದ ನರೋವಾಲ್ನ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್ಪುರಕ್ಕೆ ಭಾರತದ ಯಾತ್ರಾರ್ಥಿಗಳ ಭೇಟಿಗೆ ಅನುಕೂಲವಾಗುವಂತೆ 2019 ರ ಅಕ್ಟೋಬರ್ 24 ರಂದು ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. 5 ವರ್ಷ ಅವಧಿಯ ಈ ಒಪ್ಪಂದ ಸದ್ಯ ಮುಕ್ತಾಯಗೊಂಡಿರುವುದರಿಂದ, ಒಪ್ಪಂದದ ಅವಧಿಯನ್ನು ಮತ್ತೆ 5 ವರ್ಷಗಳ ಕಾಲ ವಿಸ್ತರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.
ಒಪ್ಪಂದದ ಸಿಂಧುತ್ವದ ವಿಸ್ತರಣೆ:"ಭಾರತದ ಯಾತ್ರಾರ್ಥಿಗಳು ಪಾಕಿಸ್ತಾನದ ಪವಿತ್ರ ಗುರುದ್ವಾರಕ್ಕೆ ಭೇಟಿ ನೀಡುವುದನ್ನು ಮುಂದುವರೆಸಲು ಅನುಕೂಲವಾಗುವಂತೆ ಒಪ್ಪಂದದ ಸಿಂಧುತ್ವವನ್ನು ವಿಸ್ತರಿಸಲಾಗಿದೆ" ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.
ಸದ್ಯ ಪಾಕಿಸ್ತಾನಕ್ಕೆ ಭೇಟಿ ನೀಡುವ ಪ್ರತಿ ಯಾತ್ರಾರ್ಥಿಗೆ ಪಾಕಿಸ್ತಾನವು 20 ಡಾಲರ್ ಸೇವಾ ಶುಲ್ಕವನ್ನು ವಿಧಿಸುತ್ತಿದೆ. ಯಾತ್ರಾರ್ಥಿಗಳ ಮನವಿಗಳನ್ನು ಗಮನಿಸಿ ಈ ಶುಲ್ಕವನ್ನು ತೆಗೆದು ಹಾಕಬೇಕೆಂದು ಭಾರತವು ಮತ್ತೊಮ್ಮೆ ಇಸ್ಲಾಮಾಬಾದ್ಗೆ ಒತ್ತಾಯಿಸಿದೆ.
ಕರ್ತಾರಪುರಕ್ಕೆ ವೀಸಾ ಮುಕ್ತ ಪ್ರಯಾಣ:ಈ ಒಪ್ಪಂದದ ಅನ್ವಯ ಭಾರತೀಯ ಯಾತ್ರಾರ್ಥಿಗಳು ಮತ್ತು ಸಾಗರೋತ್ತರ ಭಾರತೀಯ ನಾಗರಿಕ (ಒಸಿಐ) ಕಾರ್ಡ್ ಹೊಂದಿರುವವರು ಭಾರತದಿಂದ ಪಾಕಿಸ್ತಾನದ ಗುರುದ್ವಾರ ಶ್ರೀ ದರ್ಬಾರ್ ಸಾಹಿಬ್ ಕರ್ತಾರ್ ಪುರಕ್ಕೆ ವರ್ಷಪೂರ್ತಿ ವೀಸಾ ಮುಕ್ತ ಪ್ರಯಾಣ ಮಾಡಬಹುದಾಗಿದೆ.
ಯಾತ್ರಾರ್ಥಿಗಳ ಭೇಟಿಗೆ ಅನುಕೂಲವಾಗುವಂತೆ, ಡೇರಾ ಬಾಬಾ ನಾನಕ್ ಪಟ್ಟಣದಿಂದ ಝೀರೋ ಪಾಯಿಂಟ್ ವರೆಗೆ ಹೆದ್ದಾರಿ ಮತ್ತು ಭಾರತದ ಭಾಗದಲ್ಲಿ ಸಮಗ್ರ ಚೆಕ್ ಪೋಸ್ಟ್ (ಐಸಿಪಿ) ಸೇರಿದಂತೆ ಆಧುನಿಕ ಮೂಲಸೌಕರ್ಯಗಳನ್ನು ನಿರ್ಮಿಸಲಾಗಿದೆ. ಶ್ರೀ ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ನ ಸಿಇಒ ರನ್ನು ಪಾಕಿಸ್ತಾನದ ಅಧಿಕಾರಿಗಳು ನೇಮಿಸುತ್ತಾರೆ.
2.5 ಲಕ್ಷ ಯಾತ್ರಾರ್ಥಿಗಳಿಂದ ಇದುವರೆಗೂ ದರ್ಶನ:2019 ರ ನವೆಂಬರ್ನಲ್ಲಿ ಉದ್ಘಾಟನೆಯಾದಾಗಿನಿಂದ, ಶ್ರೀ ಕರ್ತಾರ್ ಪುರ್ ಸಾಹಿಬ್ ಕಾರಿಡಾರ್ ಮೂಲಕ ಸುಮಾರು 2,50,000 ಯಾತ್ರಾರ್ಥಿಗಳು ಗುರುದ್ವಾರ ಶ್ರೀ ದರ್ಬಾರ್ ಸಾಹಿಬ್ ಕರ್ತಾರ್ ಪುರಕ್ಕೆ ಭೇಟಿ ನೀಡಿದ್ದಾರೆ. ಕರ್ತಾರ್ ಪುರವು ರಾವಿ ನದಿಯ ಪಶ್ಚಿಮ ದಡದಲ್ಲಿದೆ. ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ತಮ್ಮ ಜೀವನದ ಕೊನೆಯ 18 ವರ್ಷಗಳನ್ನು ಇಲ್ಲಿಯೇ ಕಳೆದರು. ಗುರುದ್ವಾರ ಡೇರಾ ಬಾಬಾ ನಾನಕ್ ಭಾರತ-ಪಾಕಿಸ್ತಾನ ಗಡಿಯಿಂದ ಸುಮಾರು 1 ಕಿ.ಮೀ ದೂರದಲ್ಲಿದೆ.
ನದಿಯ ಪಶ್ಚಿಮ ಭಾಗದಲ್ಲಿ ಪಾಕಿಸ್ತಾನದ ಕರ್ತಾರ್ ಪುರ್ ಪಟ್ಟಣವಿದೆ. ಗುರುದ್ವಾರ ಶ್ರೀ ಕರ್ತಾರ್ ಪುರ್ ಸಾಹಿಬ್ ಪಾಕಿಸ್ತಾನದ ನರೋವಾಲ್ ಜಿಲ್ಲೆಯಲ್ಲಿದ್ದು, ಇದು ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 4.5 ಕಿ.ಮೀ ದೂರದಲ್ಲಿ ಪಂಜಾಬ್ನ ಗುರುದಾಸ್ ಪುರ ಜಿಲ್ಲೆಯ ಐತಿಹಾಸಿಕ ಪಟ್ಟಣ ಡೇರಾ ಬಾಬಾ ನಾನಕ್ ಬಳಿ ಇದೆ.
ಇದನ್ನೂ ಓದಿ : ಭಾರತದೊಂದಿಗೆ ಗಡಿ ಗಸ್ತು ವ್ಯವಸ್ಥೆ ಒಪ್ಪಂದ ದೃಢಪಡಿಸಿದ ಚೀನಾ