ನವದೆಹಲಿ:ಭಾರತ ಮತ್ತು ಚೀನಾದ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದ್ದ ಪೂರ್ವ ಲಡಾಖ್‌ನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಗಸ್ತು ತಿರುಗುವ ಬಗ್ಗೆ ಉಭಯ ರಾಷ್ಟ್ರಗಳು ಸಂಧಾನಕ್ಕೆ ಬಂದಿವೆ. ಎರಡೂ ದೇಶಗಳ ಯೋಧರು ಈ ಭಾಗದಲ್ಲಿ ಗಸ್ತು ತಿರುಗಲು ಒಪ್ಪಂದ ಮಾಡಿಕೊಂಡಿದ್ದಾಗಿ ಕೇಂದ್ರ ಸರ್ಕಾರ ಇಂದು ತಿಳಿಸಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, 2020ರಲ್ಲಿ ಉದ್ಭವಿಸಿದ ಸಮಸ್ಯೆಯಾದ ಪೂರ್ವ ಲಡಾಖ್‌ನ ಎಲ್ಎಸಿಯಲ್ಲಿ ಗಸ್ತು ತಿರುಗುವ ಬಗ್ಗೆ ಪರಿಹಾರ ಕಂಡುಕೊಳ್ಳಲಾಗಿದೆ. ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ದ್ವಿಪಕ್ಷೀಯ ಸರಣಿ ಮಾತುಕತೆಯು ಫಲಪ್ರದವಾಗಿದೆ. ಎಲ್‌ಎಸಿ ಗಡಿಯಲ್ಲಿ ಗಸ್ತಿಗೆ ಸೇನೆಗಳು ಸಂಧಾನಕ್ಕೆ ಬಂದಿವೆ ಎಂದರು.
ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿ ಗಸ್ತು ತಿರುಗುವುದಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ಮಧ್ಯೆ ಬಿಕ್ಕಟ್ಟು ಉಂಟಾಗಿತ್ತು. ಭಾರತ ಮತ್ತು ಚೀನಾದ ರಾಜತಾಂತ್ರಿಕರು ಮತ್ತು ಮಿಲಿಟರಿ ಸಂಧಾನಕಾರರು ಈ ಕುರಿತು ಮಾತುಕತೆ ನಡೆಸಿ, ಒಪ್ಪಂದಕ್ಕೆ ಬಂದಿದ್ದಾಗಿ ತಿಳಿಸಿದರು.
2020ರಿಂದ ಭಾರತ ಮತ್ತು ಚೀನಾದ ಸೇನೆಗಳು ಪೂರ್ವ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿ ಗಸ್ತಿಗಾಗಿ ಸಂಘರ್ಷ ನಡೆಸಿದ್ದವು. ಜೂನ್ ತಿಂಗಳಲ್ಲಿ ಗಲ್ವಾನ್ ಕಣಿವೆಯಲ್ಲಿ ಭೀಕರ ಘರ್ಷಣೆಯೂ ನಡೆದಿತ್ತು. ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಇದು ಗಂಭೀರ ಮಿಲಿಟರಿ ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿತ್ತು.