ಲೂಧಿಯಾನ (ಪಂಜಾಬ್): ಶನಿವಾರ ರಾತ್ರಿ ಕುಡಿದ ಅಮಲಿನಲ್ಲಿ ಎಎಸ್ಐ ಕಾರು ಚಲಾಯಿಸಿ ಅಪಘಾತ ಎಸಗಿರುವ ಆರೋಪ ಕೇಳಿ ಬಂದಿದೆ. ರಸ್ತೆಬದಿಯಲ್ಲಿ ಐಸ್ಕ್ರೀಂ ತಿನ್ನುತ್ತಿದ್ದ ಪಿಸಿಆರ್ನಲ್ಲಿದ್ದ ಇಬ್ಬರು ಪೊಲೀಸರಿಗೆ ಎಎಸ್ಐ ಕಾರು ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲ ನಶೆಯಲ್ಲಿದ್ದ ಎಎಸ್ಐ ಕಾರು ನಿಲ್ಲಿಸದೇ ಇಬ್ಬರನ್ನೂ ಸುಮಾರು 15 ಮೀಟರ್ವರೆಗೆ ಎಳೆದೊಯ್ದಿದ್ದಾರೆ. ಈ ವೇಳೆ, ಕಾರಿನ ಟೈರ್ ಕೆಳಗೆ ಬಿದ್ದು ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸಾವನ್ನಪ್ಪಿದರೆ, ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಕಾಲು ಮುರಿದುಕೊಂಡಿದ್ದಾರೆ.
ಆರೋಪಿ ಎಎಸ್ಐ ಬಂಧನ:ಮೃತನನ್ನು ಹೆಡ್ ಕಾನ್ಸ್ಟೆಬಲ್ ಆಕಾಶದೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಸಹಚರ ಎಎಸ್ಐ ಸತ್ನಾಮ್ ಸಿಂಗ್ ಅವರನ್ನು ಡಿಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ತಕ್ಷಣ ಪೊಲೀಸ್ ತಂಡ ಆರೋಪಿ ಬಲ್ವಿಂದರ್ ಸಿಂಗ್ನನ್ನು ಬಂಧಿಸಿದೆ.
ಕುಡಿದ ಅಮಲಿನಲ್ಲಿ ಅಪಘಾತ: ಆರೋಪಿ ಎಎಸ್ಐ ಬಲ್ವಿಂದರ್ ಸಿಂಗ್ ಪೊಲೀಸ್ ಠಾಣೆ ವಿಭಾಗ ನಂ.2ರಲ್ಲಿ ನಿಯೋಜನೆಗೊಂಡಿದ್ದರು. ಮೃತ ಹೆಡ್ ಕಾನ್ಸ್ಟೇಬಲ್ ಆಕಾಶದೀಪ್ ಸಿಂಗ್ ಅವರ ಅಂತ್ಯಕ್ರಿಯೆ ನಿನ್ನೆ ನೆರವೇರಿತು. ಈ ಅವಘಡ ಸಂಭವಿಸಿದಾಗ ಆರೋಪಿಯು ಎಎಸ್ಐ ಸಿವಿಲ್ನಲ್ಲಿದ್ದು, ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದರು ಎಂಬ ಆರೋಪವಿದೆ.
ಮೃತ ಸಿಬ್ಬಂದಿಗೆ ಇಬ್ಬರು ಮಕ್ಕಳು: ಆಕಾಶದೀಪ್ 2009ರಲ್ಲಿ ಪೊಲೀಸ್ ಪಡೆಗೆ ಸೇರಿದ್ದರು. ಮೂಲಗಳ ಪ್ರಕಾರ ಕಾರು ಚಲಾಯಿಸುತ್ತಿದ್ದ ಎಎಸ್ಐ ಬಲ್ವಿಂದರ್ ಸಿಂಗ್ ಪಾನಮತ್ತರಾಗಿದ್ದು, ನಶೆಯಲ್ಲಿ ಕಾರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂಬ ಮಾಹಿತಿಯೂ ಹೊರ ಬೀಳುತ್ತಿದೆ. ಆಕಾಶದೀಪ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ಬಗ್ಗೆ ಎಸ್ಎಚ್ಒ ಜೈದೀಪ್ ಜಾಖರ್ ಮಾಹಿತಿ ಹಂಚಿಕೊಂಡಿದ್ದಾರೆ.
ಓದಿ:ಪರಪ್ಪನ ಅಗ್ರಹಾರಕ್ಕೆ ಸೂರಜ್ ರೇವಣ್ಣ ಶಿಫ್ಟ್: ಇಂದು ಸಿಐಡಿ ಕಸ್ಟಡಿ ಸಾಧ್ಯತೆ - Suraj Revanna in Parappan Agrahara