ಬುರ್ದ್ವಾನ್(ಪಶ್ಚಿಮ ಬಂಗಾಳ):ರಾಜ್ಯದ ಬುರ್ದ್ವಾನ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 18 ಅವಳಿ ಮಕ್ಕಳು ಜನಿಸಿದ್ದಾರೆ. ತಾಯಂದಿರು ಮತ್ತು ನವಜಾತ ಶಿಶುಗಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಇದು ರಾಜ್ಯದಲ್ಲಿಯೇ ಮೊದಲ ಘಟನೆ ಎಂದು ವೈದ್ಯರು ಹೇಳಿದ್ದಾರೆ. ಮುಷ್ಕರ ಸಂದರ್ಭದಲ್ಲೂ ಆಸ್ಪತ್ರೆಯ ಕಿರಿಯ ವೈದ್ಯರು ಕರ್ತವ್ಯ ನಿರ್ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಆಸ್ಪತ್ರೆ ಮೂಲಗಳ ಪ್ರಕಾರ, ಬುರ್ದ್ವಾನ್ ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಬುಧವಾರ ಬೆಳಗ್ಗೆ 8 ಗಂಟೆಯವರೆಗೆ 18 ಅವಳಿ ಮಕ್ಕಳು ಜನಿಸಿದ್ದಾರೆ. 9 ಹೆರಿಗೆಗಳಲ್ಲಿ 8 ಸಿಸೇರಿಯನ್ ಮತ್ತು ಒಂದು ಸಾಮಾನ್ಯ ಹೆರಿಗೆಯಾಗಿದೆ. ಮಕ್ಕಳಿಗೆ ಜನ್ಮ ನೀಡಿದ ತಾಯಂದಿರು ಬಂಕುರಾ, ಹೂಗ್ಲಿ, ನಾಡಿಯಾ, ಜಾರ್‌ಗ್ರಾಮ್ ಮತ್ತು ಬುರ್ದ್ವಾನ್ ನಿವಾಸಿಗಳಾಗಿದ್ದಾರೆ. 11 ವೈದ್ಯರ ವೈದ್ಯಕೀಯ ತಂಡ ತಾಯಂದಿರು ಮತ್ತು ನವಜಾತ ಶಿಶುಗಳ ಆರೈಕೆಯ ಉಸ್ತುವಾರಿ ವಹಿಸಿದ್ದರು ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.