ಹೈದರಾಬಾದ್: ಜಾಗತಿಕವಾಗಿ ಮತ್ತು ಭಾರತದಲ್ಲಿ ಹೆಚ್ಚುತ್ತಿರುವ ಹಸಿರು ಮನೆ ಅನಿಲದ ಪರಿಣಾಮವೇ ಈ ಹವಾಮಾನ ಬದಲಾವಣೆಗೆ ಕಾರಣ. ಏರಿಕೆಯಾಗುತ್ತಿರುವ ಈ ತಾಪಮಾನವು ಅನೇಕ ಸಮಸ್ಯೆಗಳಿಗೆ ಕಾರಣವಾಗುವ ಜೊತೆಗೆ ಆಹಾರ, ಆರೋಗ್ಯ, ಉದ್ಯೋಗ ಮತ್ತು ಕೃಷಿ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತದೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಗಿಡಗಳನ್ನು ಹೆಚ್ಚು ಹೆಚ್ಚು ಬೆಳಸಬೇಕಿದೆ.
ಖ್ಯಾತ ಹವಾಮಾನಶಾಸ್ತ್ರಜ್ಞ ಮತ್ತು ಮುಂಬೈನ ಐಐಟಿಯ ಪ್ರಾಧ್ಯಾಪಕ ರಘು ಮುರ್ತುಗುಡ್ಡೆ ಹೇಳುವಂತೆ, ಮೇಲ್ಮೈ ಶಾಖದಿಂದ ಉಂಟಾದ ಎಲ್ ನಿನೋ ಪರಿಣಾಮದಿಂದ ಹಿಂದೂ ಮಹಾಸಾಗರ, ನಗರಗಳು ಮತ್ತು ಭಾರತದ ಹಲವು ಭಾಗಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚುತ್ತಿದೆ.
ಎಲ್ ನಿನೋ ಪರಿಣಾಮವಾಗಿ ಆಲಿಕಲ್ಲಿನಿಂದ ಕೂಡಿದ ಮಳೆ ಹೆಚ್ಚಾಗುವ ಸಾಧ್ಯತೆಗಳಿವೆ. ಹವಾಮಾನ ಬದಲಾವಣೆಯ ಕಾರಣದಿಂದಾಗಿ ಮಾನ್ಸೂನ್ ಅನಿಯಮಿತ ಮತ್ತು ಅಸ್ತವ್ಯಸ್ತವಾಗಬಹುದು. ಭೂಮಿ ಮತ್ತು ಸಮುದ್ರ ಎರಡೂ ಕಡೆ ಶಾಖ ಹೆಚ್ಚಬಹುದು. ದೇಶದ ವಿವಿಧ ಭಾಗದಲ್ಲಿ ಬೇರೆ ಬೇರೆ ಪರಿಸ್ಥಿತಿಗಳು ಕಂಡು ಬರುತ್ತದೆ. ಒಂದು ಸ್ಥಳದಲ್ಲಿ ಸದಾ ಬರಗಾಲ ಇದ್ದರೆ, ಮತ್ತೊಂದು ಸ್ಥಳದಲ್ಲಿ ಪ್ರವಾಹ ಎದುರಾಗಬಹುದು. ಮಳೆ ಮತ್ತು ಮಳೆಯ ನಡುವಿನ ಮಧ್ಯಂತರವು ಹೆಚ್ಚಾಗಬಹುದು ಅಥವಾ ಕಡಿಮೆಯಾಗಬಹುದು. ಒಂದು ಕಡೆ ಭಾರಿ ಮಳೆಯಾಗಬಹುದು ಮತ್ತೊಂದು ಕಡೆ ಮಳೆಯೇ ಆಗದೇ ಇರಬಹುದು ಎಂದು ವಿವರಣೆ ನೀಡಿದ್ದಾರೆ.
ಅಮೆರಿಕದ ಮೆರಿಲ್ಯಾಂಡ್ ಯೂನಿವರ್ಸಿಟಿಯಲ್ಲಿ ಹವಾಮಾನ ಮತ್ತು ಸಮುದ್ರಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿರುವ ರಘು ಪ್ರಸ್ತತ ಐಐಟಿ ಮುಂಬೈನ ಹವಾಮಾನ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಹವಾಮಾನ ಬದಲಾವಣೆ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ. ಹವಾಮಾನ ಬದಲಾವಣೆ ಮತ್ತು ಇತರ ಕಾರಣಗಳ ಹಿನ್ನೆಲೆಯಲ್ಲಿ ತೆಲುಗು ರಾಜ್ಯಗಳು ಇತ್ತೀಚಿನ ದಿನದಲ್ಲಿ ಅತಿ ಹೆಚ್ಚಿನ ತಾಪಮಾನಕ್ಕೆ ಸಾಕ್ಷಿಯಾಗಿವೆ.
ವಾತಾವರಣದಲ್ಲಿ ವಿಪರೀತ ತಾಪಮಾನಕ್ಕೆ ಕಾರಣಗಳೇನು?:ಋತುಮಾನದ ವಾತವಾರಣದ ಶಾಖ ಸಾಮಾನ್ಯ ಪ್ರಕ್ರಿಯೆಯಾಗಿದೆ. ಮಾರ್ಚ್, ಏಪ್ರಿಲ್ ಮತ್ತು ಮೇ ಮತ್ತು ಕೆಲವು ಬಾರಿ ಜೂನ್ನಲ್ಲಿ ಹೆಚ್ಚು ತಾಪಮಾನ ಇರುತ್ತದೆ. ಮಳೆಗಾಲ ಅದನ್ನು ತಂಪು ಮಾಡುತ್ತದೆ. ಯಾವಾಗ ಮಳೆ ಕಡಿಮೆಯಾಗುತ್ತದೆ ಹವಾಮಾನ ಮತ್ತಷ್ಟು ಬಿಸಿಯಾಗುತ್ತದೆ. ಮರುಭೂಮಿ ಪ್ರದೇಶ, ಬಿಸಿ ಸಾಗರ ಮತ್ತು ಕೆಲವು ವೇಳೆ ಸ್ಥಳೀಯ ಪರಿಸ್ಥಿತಿಗಳ ಹವಾಮಾನ ಬದಲಾವಣೆ ಹೆಚ್ಚಿನ ತಾಪಮಾನದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಈ ರೀತಿಯ ಪರಿಸ್ಥಿತಿಯನ್ನು ಇದೀಗ ದೇಶದ ಹಲವು ಭಾಗದಲ್ಲಿ ನೋಡುತ್ತಿದ್ದೇವೆ. ಈ ರೀತಿ ಹವಾಮಾನ ಬದಲಾವಣೆ 10 ವರ್ಷಕ್ಕೆ ಒಮ್ಮೆ ಕೆಲವು ವೇಳೆ ಮೂರು ವರ್ಷಕ್ಕೆ ಒಮ್ಮೆ ಉಂಟಾಗುತ್ತದೆ.
ಹೆಚ್ಚಿನ ತಾಪಮಾನದೊಂದಿಗೆ ಹವಾಮಾನವು ಹೇಗೆ ಬದಲಾಗುತ್ತದೆ?:ಹಸಿರುಮನೆ ಅನಿಲವೂ ಕೂಡ ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ. ತಾಪಮಾನ ಹೆಚ್ಚುತ್ತದೆ. ನೀರಿನ ಆವಿಯಾಗುತ್ತದೆ. ವಾತಾವರಣದಲ್ಲಿ ಶುಷ್ಕತೆಯು ಹೆಚ್ಚುತ್ತದೆ. ಗಾಳಿ ಕೂಡ ಹೆಚ್ಚಿನ ತಾಪಮಾನಕ್ಕೆ ಕಾರಣವಾಗುತ್ತದೆ. ಮಧ್ಯಪ್ರಾಚ್ಯ ದೇಶಗಳು ಬಿಸಿ ತಾಪಮಾನ ಹೊಂದಿವೆ. ಹಾಗಾಗಿ ಅರಬ್ಬೀ ಸಮುದ್ರ ಬೆಚ್ಚಗಿರುತ್ತದೆ. ಈ ಕಾರಣದಿಂದ ನಮ್ಮ ದೇಶದ ಹಲವೆಡೆ ಬಿಸಿಲಿನ ತಾಪ ಹೆಚ್ಚುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಮರಗಳನ್ನು ಕಡಿಯುವುದು ಕೂಡ ತಾಪಮಾನ ಏರಿಕೆಗೆ ಕಾರಣವಾಗುತ್ತದೆ. ಮರಗಳನ್ನು ರಕ್ಷಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಡಬೇಕು.