ನವದೆಹಲಿ:ಬಡವರಿಗಾಗಿ ಕೇಂದ್ರ ಸರ್ಕಾರ ಸಾವಿರಾರು ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದೆ. ಆದರೆ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ದೆಹಲಿಯ ಜನರು ಕೋವಿಡ್ನಿಂದ ಸಂಕಷ್ಟದಲ್ಲಿದ್ದಾಗ, ಐಷಾರಾಮಿ ಬಂಗಲೆಯನ್ನು ತಮಗಾಗಿ ನಿರ್ಮಿಸಿಕೊಂಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.
ದೆಹಲಿಯ ಜೆಜೆ ಕ್ಲಸ್ಟರ್‌ಗಳ ನಿವಾಸಿಗಳಿಗಾಗಿ ಹೊಸದಾಗಿ ನಿರ್ಮಿಸಲಾದ 1,675 ಫ್ಲ್ಯಾಟ್‌ಗಳ ಉದ್ಘಾಟನೆ, ಅಶೋಕ್ ವಿಹಾರ್‌ನಲ್ಲಿರುವ ಸ್ವಾಭಿಮಾನ್ ಅಪಾರ್ಟ್‌ಮೆಂಟ್‌ನಲ್ಲಿ ಅರ್ಹ ಫಲಾನುಭವಿಗಳಿಗೆ ಕೀಗಳನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಆಗಿದ್ದಾಗ ತಮಗಾಗಿ ಐಷಾರಾಮಿ ನಿವಾಸವನ್ನು ನಿರ್ಮಿಸಿಕೊಂಡಿದ್ದರು. ನಾನು ಎಂದೂ ಸ್ವಂತಕ್ಕಾಗಿ ಮನೆಯನ್ನು ನಿರ್ಮಿಸಿಕೊಂಡಿಲ್ಲ. ಇದು ದೇಶಕ್ಕೇ ಗೊತ್ತಿದೆ. ನನಗಾಗಿ ಐಷಾರಾಮಿ ಬಂಗಲೆಯನ್ನು ನಿರ್ಮಿಸಿಕೊಳ್ಳಬಹುದಿತ್ತು. ಬದಲಿಗೆ ಬಡವರಿಗಾಗಿ 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇವೆ ಎಂದು ಪ್ರಧಾನಿ ಹೇಳಿದರು.
ದೆಹಲಿಗೆ ಆಪ್ ಅಪಾಯ:ಕಳೆದ 10 ವರ್ಷಗಳಿಂದ ದೆಹಲಿಗೆ ಆಮ್ ಆದ್ಮಿ ಪಕ್ಷವು (ಆಪ್) ವಿಪತ್ತಾಗಿ ಕಾಡುತ್ತಿದೆ. ಮತ್ತೆ ಕೇಜ್ರಿವಾಲ್ ಸಿಎಂ ಆಗಿ ಬಂದಲ್ಲಿ ಕೇಂದ್ರಾಡಳಿತ ಪ್ರದೇಶಕ್ಕೆ ಅಪಾಯ ತಪ್ಪಿದ್ದಲ್ಲ ಎಂದು ಪ್ರಧಾನಿ ಮೋದಿ ಟೀಕಾಪ್ರಹಾರ ನಡೆಸಿದರು.