ಹೈದರಾಬಾದ್ (ತೆಲಂಗಾಣ): ಐಕಾನ್ ಸ್ಟಾರ್ ಅಲ್ಲು ಅರ್ಜುನ್- ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ-2; ದಿ ರೂಲ್.. ಸಿನಿಮಾ ಬಿಡುಗಡೆಗೂ ಮುನ್ನ ಇಲ್ಲಿನ ಸಂಧ್ಯಾ ಥಿಯೇಟರ್ನಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿ, ಅವರ ಮಗ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಈ ಪ್ರಕರಣ ಸಿನಿಮಾಗಿಂತಲೂ ಹೆಚ್ಚು ಚರ್ಚೆಯಾಗ್ತಿದೆ.
ರಾಜಕೀಯ ವಲಯ, ಸಿನಿಮಾ ಕ್ಷೇತ್ರ ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ತರಹೇವಾರಿ ವಿಡಿಯೋ, ಫೋಟೋಗಳು ಹರಿದಾಡುತ್ತಿವೆ. ಅಲ್ಲದೆ, ಇದಕ್ಕೆ ಕಾಮೆಂಟ್ಗಳು ವ್ಯಕ್ತವಾಗ್ತಿವೆ. ಈ ಮಧ್ಯೆ ತೆಲಂಗಾಣ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಹರಿಬಿಟ್ಟು ಕಾಲ್ತುಳಿತ ಘಟನೆ ಕುರಿತು ತಪ್ಪು ಸಂದೇಶ ಹರಡುತ್ತಿರುವವರಿಗೆ ಖಡಕ್ ಎಚ್ಚರಿಕೆಯನ್ನು ರವಾನಿಸಿದ್ದಾರೆ.
ಕಾಲ್ತುಳಿತ ದುರಂತದ ಬಗ್ಗೆ ಆಧಾರ ರಹಿತ ಮತ್ತು ಜನರನ್ನು ತಪ್ಪು ದಾರಿಗೆ ಎಳೆಯುವ ಪೋಸ್ಟ್ಗಳನ್ನು ಹರಿಬಿಟ್ಟರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
''ಅಂದು ಸಂಧ್ಯಾ ಥಿಯೇಟರ್ನಲ್ಲಿ ಸಂಭವಿಸಿದ ದುರ್ಘಟನೆಯ ಅಧಿಕೃತ ವಿಡಿಯೋ ಆಧರಿಸಿ ಈಗಾಗಲೇ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ತಪ್ಪಾದ ವಿಡಿಯೋಗಳನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಟ ಅಲ್ಲು ಅರ್ಜುನ್ ಸಂಧ್ಯಾ ಥಿಯೇಟರ್ಗೆ ಬರುವ ಮುನ್ನವೇ ಕಾಲ್ತುಳಿತ ಸಂಭವಿಸಿತ್ತು ಎಂದು ಪೋಸ್ಟ್ ಮಾಡಲಾಗುತ್ತಿದೆ. ಆದ್ರೆ ನಮ್ಮ ಇಲಾಖೆಯಿಂದ ಈಗಾಗಲೇ ಅಧಿಕೃತ ವಿಡಿಯೋ ಶೇರ್ ಮಾಡಲಾಗಿದೆ'' ಪೊಲೀಸ್ ವಕ್ತಾರರು ಇಂದು ಹೇಳಿದ್ದಾರೆ.
''ಅಲ್ಲದೆ, ತಮ್ಮ ಇಲಾಖೆಗೆ ಅಪಖ್ಯಾತಿ ತರುವಂತಹ ಪೋಸ್ಟ್ಗಳನ್ನು ಶೇರ್ ಮಾಡಿದರೆ ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಆದ್ರೆ ಸ್ಥಳದಲ್ಲಿ ನಡೆದ ನಿಖರವಾದ ದೃಶ್ಯಾವಳಿಗಳು ಮತ್ತು ಮಹಿತಿ ಇದ್ದರೆ ಸಾರ್ವಜನಿಕರು ಪೊಲೀಸರಿಗೆ ಒದಗಿಸುವಂತೆ'' ಅವರು ಕೋರಿದ್ದಾರೆ.
ಪ್ರಕರಣ ಹಿನ್ನೆಲೆ: ಇದೇ ಡಿಸೆಂಬರ್ 5 ರಂದು ಪುಷ್ಪ-2 ಚಿತ್ರ ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಂಡು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿತು. ಆದ್ರೆ ಇದಕ್ಕೂ ಮುನ್ನ ಅಂದ್ರೆ ಡಿಸೆಂಬರ್ 4 ರಂದು ಸಂಧ್ಯಾ ಥಿಯೇಟರ್ನಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ಅಲ್ಲು ಅರ್ಜುನ್ ಅಭಿಮಾನಿ ಎನ್ನಲಾಗ್ತಿರುವ ರೇವತಿ ಎಂಬ ಮಹಿಳೆ ಜನಸಂದಣಿಯಿಂದ ಉಂಟಾದ ಕಾಲ್ತುಳಿತದಲ್ಲಿ ಉಸಿರು ಚೆಲ್ಲಿದ್ದರು. ಇದೇ ವೇಳೆ ಅವರ ಮಗ ತೇಜಸ್ ಗಂಭೀರವಾಗಿ ಗಾಯಗೊಂಡಿದ್ದು, ಆತನಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಈ ದುರ್ಘಟನೆ ಬಳಿಕ ನಟ ಅಲ್ಲು ಅರ್ಜುನ್ ಸೇರಿದಂತೆ ಥಿಯೇಟರ್ ಮಾಲೀಕರ ವಿರುದ್ಧ ಮೃತ ಮಹಿಳೆಯ ಪತಿ ನೀಡಿದ್ದ ದೂರು ಆಧರಿಸಿ ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದರು. ಅದೇ ದಿನ ಜಾಮೀನು ಪಡೆದ ನಟ ಜೈಲಿನಿಂದ ಹೊರಬಂದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಈ ದುರ್ಘಟನೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಅಲ್ಲದೆ, ಸಂತ್ರಸ್ತರ ಕುಟುಂಬಕ್ಕೆ 25 ಲಕ್ಷ ರೂ. ನೆರವು ಮತ್ತು ಬಾಲಕನ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದರು. ಅಲ್ಲದೆ, ನೊಂದ ಕುಟುಂಬದೊಂದಿಗೆ ತಾವು ನಿಲ್ಲುವುದಾಗಿ ತಿಳಿಸಿದ್ದರು.
ಮಂಗಳವಾರ (ಡಿ.24) ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಪೊಲೀಸರ ಸೂಚನೆ ಹಿನ್ನೆಲೆ ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ನಟ ಅಲ್ಲು ಅರ್ಜುನ್ ತೆರಳಿ ವಿಚಾರಣೆ ಎದುರಿಸಿದ್ದರು.
ಇದನ್ನೂ ಓದಿ: ಚಿಕ್ಕಡಪಲ್ಲಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದ ನಟ ಅಲ್ಲು ಅರ್ಜುನ್