ಲಖೀಂಪುರ ಖೇರಿ (ಉತ್ತರಪ್ರದೇಶ):ಕೆಲವರಿಗೆ ರೀಲ್ಸ್ ಮಾಡುವುದೇ ಗೀಳಾಗಿರುತ್ತದೆ. ಫೇಮಸ್ ಆಗಲು ಚಿಕ್ಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಅಪಾಯಕಾರಿ ಸ್ಥಳಗಳಲ್ಲಿ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಅದೆಷ್ಟೋ ಪ್ರಕರಣಗಳು ನಡೆದಿವೆ. ಅಂಥದ್ದೇ ಒಂದು ಕೇಸ್ ಉತ್ತರಪ್ರದೇಶದ ಲಖೀಂಪುರ ಖೇರಿಯಲ್ಲಿ ಇಂದು (ಬುಧವಾರ) ನಡೆದಿದೆ.
ಹಳಿಯ ಮೇಲೆ ಕುಟುಂಬವೊಂದು ರೀಲ್ಸ್ ಮಾಡುತ್ತಿದ್ದಾಗ ರೈಲು ಡಿಕ್ಕಿಯಾಗಿ ಪತಿ, ಪತ್ನಿ ಹಾಗೂ 3 ವರ್ಷದ ಮಗು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ದುರಂತ ಬುಧವಾರ ಬೆಳಗ್ಗೆ 11 ಗಂಟೆಗೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಏನಾಯ್ತು?:ಇಲ್ಲಿನ ಲಖೀಂಪುರ ಖೇರಿಯ ಆಯಿಲ್ ರೈಲ್ವೇ ಕ್ರಾಸಿಂಗ್‌ನಲ್ಲಿ ದಂಪತಿ ಅವರ 3 ವರ್ಷದ ಮಗುವಿನ ಜೊತೆ ರೀಲ್ಸ್ ಮಾಡುತ್ತಿದ್ದರು. ಈ ವೇಳೆ ರಭಸವಾಗಿ ಬಂದ ರೈಲು ಮೂವರನ್ನು ಡಿಕ್ಕಿ ಹೊಡೆದಿದೆ. ಇದರಿಂದ ಮೂವರ ದೇಹಗಳು ಛಿದ್ರವಾಗಿವೆ. ಇದನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.