ಹೈದರಾಬಾದ್: ಪ್ರಜಾಪ್ರಭುತ್ವದಲ್ಲಿ ಮತದಾರರೇ ನಿಜವಾದ ನಿರ್ಣಾಯಕರು. ದೇಶ ಮತ್ತು ರಾಜ್ಯ ಪ್ರಗತಿಯಾಗಬೇಕಾದರೆ ಪ್ರತಿಯೊಬ್ಬ ಮತದಾರರು ತಮ್ಮ ಅಮೂಲ್ಯವಾದ ಮತದ ಹಕ್ಕನ್ನು ಚಲಾಯಿಸಬೇಕು. ಐದು ವರ್ಷಗಳ ಕಾಲ ಪ್ರತಿನಿಧಿಯನ್ನು ಆಯ್ಕೆ ಮಾಡುವ ಮತದಾರ ತನ್ನ ಮತದ ಬಗ್ಗೆ ಯಾವ ಅನುಮಾನವನ್ನೂ ಹೊಂದಿರಬಾರದು.
ಹೌದು, ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ಮತಕೇಂದ್ರ ಪ್ರವೇಶಿಸಿದ ಬಳಿಕ ಇವಿಎಂ ಮೇಲೆ ಬಟನ್ ಒತ್ತಿದರೆ ಸಾಲದು. ತಾನು ಹಾಕಿದ ಮತ, ತಾನು ಬಯಸಿದ ಅಭ್ಯರ್ಥಿಗೆ ಹೋಗಿದೆಯೋ, ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸಹ ಅಗತ್ಯ. ಇದಕ್ಕಾಗಿ ಚುನಾವಣಾ ಆಯೋಗ ಮತದಾನದಲ್ಲಿ ಉತ್ತರದಾಯಿತ್ವ ವ್ಯವಸ್ಥೆ ಜಾರಿಗೆ ತಂದಿದೆ. ಮತದಾನದ ಕಾರ್ಡ್ (ವಿವಿ ಪ್ಯಾಟ್)ನಲ್ಲಿ ಅಭ್ಯರ್ಥಿಗೆ ಮತ ಹಾಕಿರುವುದನ್ನು ಪ್ರದರ್ಶಿಸಲಾಗುತ್ತದೆ. ಈ ಮೂಲಕ ಮತದಾರರು ತಾವು ಯಾರಿಗೆ ಮತ ಚಲಾಯಿಸಿದ್ದೇವೆ ಎಂಬುದನ್ನು ದೃಢೀಕರಿಸಿಕೊಳ್ಳಬಹುದು.
ಮತದಾರರಿಗೆ ಚುನಾವಣಾ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸಲು 'ಈಟಿವಿ ಭಾರತ್' ಕೋರಿಕೆಯ ಮೇರೆಗೆ ಮತದಾನದ ಡೆಮೊ (ಅಣಕು) ಮಾಡಲಾಗಿದೆ. ತೆಲಂಗಾಣ ಮುಖ್ಯ ಚುನಾವಣಾಧಿಕಾರಿ ವಿಕಾಸ್‌ರಾಜ್ ಆದೇಶದಂತೆ ಹೈದರಾಬಾದ್‌ನ ನಿಜಾಮ್ ಕಾಲೇಜಿನಲ್ಲಿ ಸ್ಥಾಪಿಸಲಾದ ಚುನಾವಣಾ ತರಬೇತಿ ಕೇಂದ್ರದಲ್ಲಿ ಅಧಿಕಾರಿಗಳು ಮಾದರಿ ಮತದಾನ ವ್ಯವಸ್ಥೆಯನ್ನು ಪ್ರದರ್ಶಿಸಿದರು. ಇವಿಎಂಗಳು ಹೇಗೆ ಕಾರ್ಯನಿರ್ವಹಿಸುತ್ತವೆ. ಮತದಾರರು ತಮ್ಮ ಮತವನ್ನು ಹೇಗೆ ಪರಿಶೀಲಿಸಬಹುದು ಎಂಬುದನ್ನು ವಿವರಿಸಿದರು.
ಮತದಾನದ ಹಂತಗಳು:
- ಮತದಾರರ ಚೀಟಿ ಮತ್ತು ಗುರುತಿನ ಚೀಟಿಯೊಂದಿಗೆ ಮತಗಟ್ಟೆ ಕೇಂದ್ರ ಪ್ರವೇಶಿಸಿದ ನಂತರ ಮೊದಲು ಮತಗಟ್ಟೆ ಅಧಿಕಾರಿ-1ರ ಬಳಿಗೆ ಹೋಗಬೇಕು. ಅಧಿಕಾರಿಯು ತಮ್ಮ ಬಳಿಯಿರುವ ಮತದಾರರ ಪಟ್ಟಿಯಲ್ಲಿ ವಿವರಗಳನ್ನು ಪರಿಶೀಲಿಸುತ್ತಾರೆ. ಪಟ್ಟಿಯಲ್ಲಿನ ಮತದಾರರ ಹೆಸರು ಮತ್ತು ಕ್ರಮ ಸಂಖ್ಯೆಯನ್ನು ಓದಲಾಗುತ್ತದೆ.
- ಅಲ್ಲಿಂದ ಮತದಾರರು ಮತಗಟ್ಟೆ ಅಧಿಕಾರಿ-2ರ ಬಳಿಗೆ ಹೋಗಬೇಕು. ಅಧಿಕಾರಿಯು ತನ್ನ ಬಳಿಯಿರುವ ಚೀಟಿಯ ವಿವರಗಳನ್ನು ಪರಿಶೀಲಿಸಿ, ಸಹಿ ತೆಗೆದುಕೊಳ್ಳುತ್ತಾರೆ. ಮತದಾರರು ಅನಕ್ಷರಸ್ಥರಾಗಿದ್ದರೆ, ಬೆರಳಚ್ಚು ತೆಗೆದುಕೊಳ್ಳಲಾಗುತ್ತದೆ. ಇದೇ ವೇಳೆ, ಎಡಗೈಯ ತೋರು ಬೆರಳಿನ ಮೇಲೆ ಶಾಯಿ ಗುರುತು ಹಾಕಲಾಗುತ್ತದೆ.
- ಅದರ ನಂತರ ಮತದಾರರು ಮತಗಟ್ಟೆ ಅಧಿಕಾರಿ-3ರ ಬಳಿಗೆ ಹೋಗಬೇಕು. ಆ ಅಧಿಕಾರಿಯು ಮತದಾರನ ಚೀಟಿಯನ್ನು ಪರಿಶೀಲಿಸುತ್ತಾರೆ. ಕಂಟ್ರೋಲ್ ಯೂನಿಟ್‌ನಲ್ಲಿ ಬ್ಯಾಲೆಟ್ ಯೂನಿಟ್‌ಗೆ ಚಾಲನೆ ನೀಡುತ್ತಾರೆ. ಬ್ಯಾಲೆಟ್ ಯೂನಿಟ್‌ನಲ್ಲಿ ಅಂಟಿಸಿದ ಬ್ಯಾಲೆಟ್ ಪೇಪರ್‌ನಲ್ಲಿ ಮತ ಹಾಕಲು ನಿರ್ಧರಿಸುವ ಮತದಾರರು ತಮ್ಮ ಹೆಸರು, ಪಕ್ಷದ ಚಿಹ್ನೆ ಮುಂದಿರುವ ಬಟನ್ ಒತ್ತಬೇಕು. ಮತ ಬೀಳುವ ಮೊದಲು ಹಸಿರು ಎಲ್ಇಡಿ ದೀಪ ಬೆಳಗುತ್ತದೆ. ಬಟನ್ ಒತ್ತಿದಾಗ ಅದರ ಮುಂದೆ ಕೆಂಪು ದೀಪ ಬೆಳಗುತ್ತದೆ. ಬೀಪ್ ಧ್ವನಿ ಬರುತ್ತದೆ. ಬ್ಯಾಲೆಟ್ ಯೂನಿಟ್‌ನಲ್ಲಿ ಹಸಿರು ದೀಪ ಆಫ್ ಆಗುತ್ತದೆ.
- ಇದೇ ವೇಳೆ, ಹತ್ತಿರದ ವಿವಿಪ್ಯಾಟ್ ಯಂತ್ರದಲ್ಲಿ ಮತದ ಮುದ್ರಿತ ಪ್ರತಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಪಕ್ಷದ ಚಿಹ್ನೆ ಮತ್ತು ಅಭ್ಯರ್ಥಿಯ ಹೆಸರು ಕಾಣಿಸುತ್ತದೆ. ಈ ಮುದ್ರಿತ ಪ್ರತಿ ಏಳು ಸೆಕೆಂಡುಗಳ ಕಾಲ ಗೋಚರಿಸುತ್ತದೆ. ನಂತರ ಅದರೊಳಗೆ ಬೀಳುತ್ತದೆ. ಅದನ್ನು ಗಮನಿಸುವ ಮೂಲಕ ಮತದಾರರು ತಾವು ಚಲಾಯಿಸಿದ ಮತ ಸರಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಏಕಕಾಲದಲ್ಲಿ ಎರಡು ಬ್ಯಾಲೆಟ್ ಯೂನಿಟ್: ಲೋಕಸಭೆ ಮತ್ತು ವಿಧಾನಸಭೆಗಳು ಏಕಕಾಲದಲ್ಲಿ ನಡೆದರೆ ಎರಡು ಬ್ಯಾಲೆಟ್ ಯೂನಿಟ್ ಇರುತ್ತದೆ. ಸಂಸದ ಮತ್ತು ಶಾಸಕ ಅಭ್ಯರ್ಥಿಗಳು ಪ್ರತ್ಯೇಕವಾಗಿ ಮತ ಚಲಾಯಿಸಬೇಕು. ಮತದಾನದ ಸಮಯದ ಕೊನೆಯಲ್ಲಿ ಅಧಿಕಾರಿಗಳು ಕ್ಲೋಸ್ ಬಟನ್ ಒತ್ತುತ್ತಾರೆ. ಚಲಾವಣೆಯಾದ ಮತಗಳು ಮತ್ತು ಅಭ್ಯರ್ಥಿಗಳ ಸಂಖ್ಯೆಯನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಮತದಾನ ಮುಕ್ತಾಯಗೊಂಡಿರುವುದು ಕಂಡು ಬರುತ್ತಿದೆ.
ಬಳಿಕ ಮತಗಟ್ಟೆ ಏಜೆಂಟರ ಸಮ್ಮುಖದಲ್ಲಿ ಬ್ಯಾಲೆಟ್ ಯೂನಿಟ್‌ಗೆ ಮುದ್ರೆ ಹಾಕಲಾಗುತ್ತದೆ. ಅದನ್ನು ಪೆಟ್ಟಿಗೆಯಲ್ಲಿ ಇರಿಸಿ ಮತ್ತು ಅದನ್ನು ಭದ್ರ ಪಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿಗಳು ಹಾಗೂ ಮತಗಟ್ಟೆ ಏಜೆಂಟರ ಸಹಿ ತೆಗೆದುಕೊಳ್ಳಲಾಗುತ್ತದೆ. ಈ ಕಂಟ್ರೋಲ್ ಯೂನಿಟ್‌ಗಳು ಮತ್ತು ವಿವಿ ಪ್ಯಾಟ್ ಯಂತ್ರಗಳು ಮತ ಎಣಿಕೆ ಮುಗಿಯುವವರೆಗೆ ಭದ್ರವಾಗಿರುತ್ತವೆ.
ಇದನ್ನೂ ಓದಿ:ಮಂಗಳೂರು: ಮತದಾನ ಮಾಡುವ ಫೋಟೋ ವೈರಲ್, ಪ್ರಕರಣ ದಾಖಲು