ರಾಂಚಿ(ಜಾರ್ಖಂಡ್):ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ(ಇಡಿ) ಬಂಧನದಲ್ಲಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಸೋಮವಾರ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತಯಾಚನೆಯಲ್ಲಿ ಪಾಲ್ಗೊಂಡಿದ್ದರು. ನೂತನ ಸಿಎಂ ಚಂಪೈ ಸೊರೇನ್ ಪರವಾಗಿ ಅವರು ಮತ ಹಾಕಿದರು. ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಾ, ತಮ್ಮ ವಿರುದ್ಧ ಮಾಡಲಾದ ಆರೋಪಗಳು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ತಿಳಿಸಿದರು.
"ಕೇಂದ್ರ ಸರ್ಕಾರ ಬುಡಕಟ್ಟು ವಿರೋಧಿ": "ಆದಿವಾಸಿಗಳ ಮೇಲೆ ಬಿಜೆಪಿ ಪ್ರಹಾರ ನಡೆಸುತ್ತಿದೆ. ಕೇಂದ್ರ ಸರ್ಕಾರ ಬುಡಕಟ್ಟು ಜನಾಂಗದ ವಿರೋಧಿಯಾಗಿದೆ. ರಾಜ್ಯದಲ್ಲಿ ಬುಡಕಟ್ಟು ಜನಾಂಗದವರು ಮುಖ್ಯಮಂತ್ರಿ ಆಗಿದ್ದನ್ನು ಅದು ಸಹಿಸುತ್ತಿಲ್ಲ. ಆದರೆ, ಬುಡಕಟ್ಟು ರಾಜ್ಯದಲ್ಲಿ ಅದೇ ಜನಾಂಗದವರು ಮಾತ್ರ ಚುಕ್ಕಾಣಿ ಹಿಡಿಯುತ್ತಾ ಎಂಬುದನ್ನು ತಿಳಿದಿರಬೇಕು" ಎಂದು ಸೊರೇನ್ ಕುಟುಕಿದರು.
"ರಾಜ್ಯದಲ್ಲಿ ಬಿಜೆಪಿ ಒಡೆದು ಆಳುವ ತಂತ್ರ ಅನುಸರಿಸಿದರು. ನನ್ನನ್ನು ಸಿಎಂ ಸ್ಥಾನದಿಂದ ಇಳಿಸಲು ಭೂ ಹಗರಣದಲ್ಲಿ ಸಿಲುಕಿಸಿದರು. ನಾನು ಪದತ್ಯಾಗ ಮಾಡಿದರೂ, ಕೊನೆಗೆ ಬುಡಕಟ್ಟು ಜನಾಂಗದ ವ್ಯಕ್ತಿಯೇ ರಾಜ್ಯದ ಸಿಎಂ ಆಗಿದ್ದಾರೆ. ಈ ಮೂಲಕ ಕಮಲ ಪಕ್ಷ ತನ್ನನ್ನು ತಾನು ರಾಜ್ಯದ ಜನರ ಮುಂದೆ ಬೆತ್ತಲು ಮಾಡಿಕೊಂಡಿದೆ" ಎಂದು ಟೀಕಿಸಿದರು.
ತಮ್ಮ ವಿರುದ್ಧ ದಾಖಲಾಗಿರುವ ಭೂ ಅಕ್ರಮ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಕೇಸ್ ಸಾಬೀತು ಮಾಡಲು ಬಿಜೆಪಿಗೆ ಹೇಮಂತ್ ಸೊರೇನ್ ಸವಾಲು ಹಾಕಿದರು. ನನ್ನ ವಿರುದ್ಧ ಮಾಡಲಾಗಿರುವ ಆರೋಪ ನಿಜವಾದಲ್ಲಿ ನಾನು ರಾಜಕೀಯದಿಂದಲೇ ನಿವೃತ್ತಿ ಪಡೆಯುವೆ. ಭ್ರಷ್ಟಾಚಾರ ಆರೋಪವನ್ನು ಸಾಬೀತುಪಡಿಸಿ ಎಂದು ಗುಡುಗಿದರು.