ನವದೆಹಲಿ:ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಸೋಂಕಿನ ಕುರಿತು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಸೂಚಿಸಿ ಸಲಹೆಗಳನ್ನು ಬಿಡುಗಡೆ ಮಾಡಿದೆ. ದೇಶದಲ್ಲಿ ಝಿಕಾ ವೈರಸ್ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆ ಎಲ್ಲಾ ರಾಜ್ಯಗಳು ನಿರಂತರವಾಗಿ ಈ ಕುರಿತು ನಿಗಾ ವಹಿಸುವಂತೆ ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ ಅತುಲ್ ಗೋಯೆಲ್ ತಿಳಿಸಿದ್ದಾರೆ.
ಝಿಕಾ ಸೋಂಕು ಗರ್ಭಿಣಿ ಭ್ರೂಣದ ಮೈಕ್ರೊಸೆಫಾಲಿ (ತಲೆಗಾತ್ರ ಕಡಿಮೆ) ಮತ್ತು ನರವೈಜ್ಞಾನಿಕ ಸಮಸ್ಯೆಗೆ ಕಾರಣವಾಗುವ ಹಿನ್ನೆಲೆ ಅಗತ್ಯ ಮೇಲ್ವಿಚಾರಣೆಯೊಂದಿಗೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವಂತೆ ಸೂಚಿಸಲಾಗಿದೆ. ಝಿಕಾ ವೈರಸ್ ಸೋಂಕಿತ ಪ್ರದೇಶಗಳಲ್ಲಿ ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸುವುದು. ಇಂತಹ ಪ್ರದೇಶಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯವನ್ನು ನೀಡುವಂತೆ, ಗರ್ಭಿಣಿಯರಲ್ಲಿ ಝಿಕಾ ಸೋಂಕು ದೃಢಪಟ್ಟರೆ, ಕೇಂದ್ರ ಸರ್ಕಾರದ ಮಾರ್ಗಸೂಚನೆ ಅನುಸಾರ ಕ್ರಮ ನಡೆಸುವಂತೆ ಕೂಡ ರಾಜ್ಯಗಳಿಗೆ ಒತ್ತಾಯಿಸಲಾಗಿದೆ.
ಏಡಿಸ್ ಸೊಳ್ಳೆಗಳಿಂದ ಪ್ರದೇಶಗಳು ಮುಕ್ತವಾಗಿರುವಂತೆ ನೋಡಿಕೊಳ್ಳುವ ಜೊತೆಗೆ ಈ ಕುರಿತು ಮೇಲ್ವಿಚಾರಣೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಅಗತ್ಯ ಆರೋಗ್ಯ ಸೌಲಭ್ಯ ಮತ್ತು ಆಸ್ಪತ್ರೆಗಳ ಕುರಿತು ಅವರು ಸಲಹೆ ನೀಡಬೇಕು. ಜನನಿಬಿಡ ಪ್ರದೇಶ, ಮನೆ ಸುತ್ತಮುತ್ತ, ಕಾರ್ಯ ಸ್ಥಳ, ಶಾಲೆ, ಕಟ್ಟಡ ನಿರ್ಮಾಣ ಸ್ಥಳಗಳು, ಸಂಸ್ಥೆ ಸುತ್ತಮುತ್ತ ಝಿಕಾ ಸೋಂಕಿನ ಕುರಿತು ಹೆಚ್ಚಿನ ಕಣ್ಗಾವಲುವಹಿಸಿ, ಅಗತ್ಯ ಕ್ರಮಕ್ಕೆ ಮುಂದಾಗಬೇಕು.
ಜೊತೆಗೆ ರಾಜ್ಯಗಳು ಸಾಮಾಜಿಕ ಜಾಲತಾಣ ಮತ್ತಿತರ ವೇದಿಕೆ ಬಳಕೆ ಮಾಡಿಕೊಂಡು ಝಿಕಾ ವೈರಸ್ ಸೋಂಕಿನ ಕುರಿತು ಮುನ್ನೆಚ್ಚರಿಕೆ ಕ್ರಮದ ಅರಿವು ಮೂಡಿಸಬೇಕು. ಈ ಮೂಲಕ ಸೋಂಕಿನ ಕುರಿತು ಸಮುದಾಯದಲ್ಲಿ ಮೂಡಿರುವ ಆತಂಕ ತಗ್ಗಿಸುವ, ಅರಿವು ಮೂಡಿಸಬೇಕು. ಝಿಕಾ ಕೂಡ ಇತರೆ ಸೋಂಕಿನಂತೆ ಯಾವುದೇ ಲಕ್ಷಣ ಅಥವಾ ಸೌಮ್ಯ ಲಕ್ಷಣ ಹೊಂದಿದ್ದು, ಈ ಕುರಿತು ಜನರಿಗೆ ತಿಳಿಸಬೇಕು.