ನವದೆಹಲಿ: ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್ ) ಬರ ಪರಿಹಾರ ಬಿಡುಗಡೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ದತ್ತಾಂಶವನ್ನು ನೀಡಿದೆ ಮತ್ತು ಅಫಿಡವಿಟ್ ಸಲ್ಲಿಸಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ರಾಜ್ಯ ಸರ್ಕಾರದ ಅರ್ಜಿ ವಿಚಾರಣೆ ನಡೆಸಿದರು.
ಕರ್ನಾಟಕ ಸರ್ಕಾರ ಪರ ಹಿರಿಯ ವಕೀಲ ಕಪಿಲ್ ಸಿಬಲ್, ಕೇಂದ್ರ ಸರ್ಕಾರ ನಮಗೆ ಕರ್ನಾಟಕ ಸರ್ಕಾರ ಡೇಟಾ ನೀಡಿಲ್ಲ ಎಂದು ಹೇಳಿದ್ದರು. ಆದರೆ ನಮ್ಮ ಬಳಿ ಅವರ ಡೇಟಾ ಇದೆ. ನಾವು ಅಫಿಡವಿಟ್ ಸಲ್ಲಿಸುತ್ತೇವೆ ಎಂದರು. ಕರ್ನಾಟಕ ಸರ್ಕಾರ ತೃಪ್ತಿಯಾಗದಿದ್ದರೆ ನ್ಯಾಯಾಲಯವು ಮುಂದಿನ ದಿನಾಂಕದಂದು ಈ ವಿಷಯವನ್ನು ಕೈಗೆತ್ತಿಕೊಳ್ಳುತ್ತದೆ ಮತ್ತು ಬೇಸಿಗೆ ರಜೆಯ ನಂತರ ವಿಚಾರಣೆ ಆಲಿಸುತ್ತೇವೆ ಎಂದು ನ್ಯಾಯಮೂರ್ತಿ ಗವಾಯಿ ತಿಳಿಸಿದರು. ಇದಕ್ಕೆ ಸಮ್ಮತಿಸಿದ ಸಿಬಲ್, " ಸ್ವಂತ ನೀತಿಯನ್ನು ಅವರು ಪರಿಗಣಿಸಬೇಕಾದ ಅಗತ್ಯ ಇದೆ. ನಾನು ಇಂದು ವಿವಾದಕ್ಕೆ ಇಳಿಯಲು ಬಯಸುವುದಿಲ್ಲ, ನಾವು ಅಫಿಡವಿಟ್ ಸಲ್ಲಿಸುತ್ತೇವೆ ಎಂದು ಪೀಠಕ್ಕೆ ತಿಳಿಸಿದರು. ಸಂಕ್ಷಿಪ್ತ ವಿಚಾರಣೆ ನಂತರ, ಬೇಸಿಗೆ ರಜೆಯ ನಂತರ ವಿಚಾರಣೆ ನಿಗದಿಪಡಿಸಲು ಪೀಠವು ಒಪ್ಪಿಕೊಂಡಿತು.
ರಾಜ್ಯದಲ್ಲಿನ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರಕ್ಕೆ ಸುಮಾರು 3,400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಏಪ್ರಿಲ್ 29 ರಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.