ಮೈನ್‌ಪುರಿ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಸಂಘಟನಾ ಸಮಿತಿಯ ಆರು ಸದಸ್ಯರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಈ ಘಟನೆಯಲ್ಲಿ ಒಟ್ಟು 123 ಮಂದಿ ಸಾವನ್ನಪ್ಪಿದ್ದು, ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ಇದೀಗ ಈ ಅಪಘಾತದ ನಂತರ ಮೊದಲ ಬಾರಿಗೆ ಸ್ವಯಂಘೋಷಿತ ದೇವಮಾನವ ಸೂರಜ್‌ಪಾಲ್ ಅಲಿಯಾಸ್ 'ಭೋಲೆ ಬಾಬಾ' ವಿಡಿಯೋ ಮೂಲಕ ಮೊದಲ ಹೇಳಿಕೆ ನೀಡಿದ್ದಾರೆ.
"ಜುಲೈ 2ರ ಘಟನೆಯ ನಂತರ ನಾವು ತೀವ್ರವಾಗಿ ನೊಂದಿದ್ದೇನೆ. ಈ ದುಃಖದ ಸಮಯ ಜಯಿಸಲು ದೇವರು ನಮಗೆ ಶಕ್ತಿ ನೀಡಲಿ. ಎಲ್ಲರೂ ಸರ್ಕಾರ ಮತ್ತು ಆಡಳಿತದಲ್ಲಿ ನಂಬಿಕೆ ಇಡಬೇಕು. ಘಟನೆಗೆ ಕಾರಣರಾದ ಕಿಡಿಗೇಡಿಗಳಾದವರನ್ನು ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ದುಃಖಿತ ಕುಟುಂಬಗಳು ಮತ್ತು ಗಾಯಾಳುಗಳ ಜೊತೆಗೆ ನಿಂತು ಅವರ ಜೀವನದುದ್ದಕ್ಕೂ ಅವರಿಗೆ ಸಹಾಯ ಮಾಡುವಂತೆ ನನ್ನ ವಕೀಲ ಎ.ಪಿ.ಸಿಂಗ್ ಮೂಲಕ ಸಮಿತಿಯ ಸದಸ್ಯರನ್ನು ವಿನಂತಿಸಿದ್ದೇನೆ" ಎಂದು ಈ ವಿಡಿಯೋ ಹೇಳಿಕೆಯಲ್ಲಿ ಹತ್ರಾಸ್ ಕಾಲ್ತುಳಿತ ಘಟನೆಯ ಕುರಿತು ಭೋಲೆ ಬಾಬಾ ತಿಳಿಸಿದ್ದಾರೆ.
ಸಂಘಟನಾ ಸಮಿತಿಗೆ ಸಂಬಂಧಿಸಿದ ಆರೋಪಿಗಳ ಬಂಧನ:ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್ ಲಡೈಟ್, ಉಪೇಂದ್ರ ಸಿಂಗ್, ಮೇಘ್ ಸಿಂಗ್, ಮುಕೇಶ್ ಕುಮಾರ್, ಮಂಜು ಯಾದವ್ ಮತ್ತು ಮಂಜು ದೇವಿ ಎಂಬುವರನ್ನು ಬಂಧಿಸಲಾಗಿದೆ. ಈ ವ್ಯಕ್ತಿಗಳು ಸಂಘಟನಾ ಸಮಿತಿಯೊಂದಿಗೆ ಸಂಪರ್ಕ ಹೊಂದಿರುವುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ. ಈ ಹಿಂದೆಯೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಇವರ ಕೆಲಸವೆಂದರೆ ಪಂಡಲ್ ವ್ಯವಸ್ಥೆ ಮಾಡುವುದು ಮತ್ತು ಜನರನ್ನು ಒಟ್ಟುಗೂಡಿಸುವುದಾಗಿದೆ.