ನವದೆಹಲಿ:ಕಾಂಗ್ರೆಸ್ ಜೊತೆ ಮೈತ್ರಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಹರಿಯಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಅಭ್ಯರ್ಥಿಗಳ ಆರನೇ ಪಟ್ಟಿ ಬಿಡುಗಡೆ ಮಾಡಿದೆ.
ಒಟ್ಟು 89 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಗೆ ಸ್ಪರ್ಧಿಸುತ್ತಿರುವ ಆರನೇ ಪಟ್ಟಿಯಲ್ಲಿ 19 ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಇದರೊಂದಿಗೆ ಇಲ್ಲಿಯವರೆಗೆ 89 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದಂತಾಗಿದೆ. ಇನ್ನೊಬ್ಬ ಅಭ್ಯರ್ಥಿಯ ಹೆಸರು ಪ್ರಕಟಿಸಬೇಕಿದೆ.
ಈ ಪಟ್ಟಿಯಲ್ಲಿ ಕಲ್ಕಾ ಕ್ಷೇತ್ರದಿಂದ ಪಿ.ಗುಜ್ಜರ್, ಪಂಚಕುಲದಿಂದ ಪ್ರೇಮ್ ಗರ್ಗ್, ಅಂಬಾಲಾ ನಗರದಿಂದ ಕೇತನ್ ಶರ್ಮಾ ಮತ್ತು ಮುಲಾನಾದಿಂದ ಗುರ್ತೇಜ್ ಸಿಂಗ್ ಕಣಕ್ಕಿಳಿಯಲಿದ್ದಾರೆ. ನಿನ್ನೆಯಷ್ಟೇ ಎಎಪಿ 21 ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆಗಳಿಸಿತ್ತು.
40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದ ಎಎಪಿ:ಹರಿಯಾಣ ಚುನಾವಣಾ ಕಣದಲ್ಲಿನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಎಎಪಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ದೆಹಲಿ ಸಚಿವೆ ಅತಿಶಿ, ಸೌರಭ್ ಭಾರಧ್ವಾಜ್, ಸಂಜಯ್ ಸಿಂಗ್ ಮತ್ತು ಮನೀಷ್ ಸಿಸೋಡಿಯಾ ಸೇರಿದಂತೆ ಪ್ರಮುಖರಿದ್ದಾರೆ.
ಕಾಂಗ್ರೆಸ್ ನಾಲ್ಕನೇ ಪಟ್ಟಿ ರಿಲೀಸ್, ಆದಿತ್ಯ ಸುರ್ಜೇವಾಲಗೆ ಟಿಕೆಟ್: ಕಾಂಗ್ರೆಸ್ ಪಕ್ಷ ಗುರುವಾರ ತನ್ನ ನಾಲ್ಕನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಐವರು ಅಭ್ಯರ್ಥಿಗಳ ಹೆಸರು ಘೋಷಿಸಿದೆ. ಇಲ್ಲಿಯವರೆಗೆ ಕೈ ಪಕ್ಷ 86 ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ.