ಕರ್ನಾಟಕ

karnataka

ETV Bharat / bharat

'ಜ್ಞಾನವಾಪಿ ಮಸೀದಿ ಬೃಹತ್‌ ದೇಗುಲದ ಅವಶೇಷಗಳ ಮೇಲೆ ನಿರ್ಮಾಣ': ASI ಸರ್ವೇ ವರದಿ ಬಹಿರಂಗಪಡಿಸಿದ ಹಿಂದೂ ಅರ್ಜಿದಾರರ ಪರ ವಕೀಲ

'ಬೃಹತ್ ಹಿಂದೂ ದೇವಾಲಯದ ಅವಶೇಷಗಳ ಮೇಲೆ ಜ್ಞಾನವಾಪಿ ಮಸೀದಿ ಕಟ್ಟಲಾಗಿದೆ' ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಡೆಸಿರುವ ಸರ್ವೇ ವರದಿಯ ವಿಚಾರಗಳನ್ನು ಹಿಂದೂ ದೂರುದಾರರ ಪರ ವಕೀಲರು ಗುರುವಾರ ಬಹಿರಂಗಪಡಿಸಿದರು.

gyanvapi-mosque
ಗ್ಯಾನವಾಪಿ ಮಸೀದಿ ಪ್ರಕರಣ

By ETV Bharat Karnataka Team

Published : Jan 26, 2024, 7:26 AM IST

Updated : Jan 26, 2024, 8:55 AM IST

ವಾರಣಾಸಿ(ಉತ್ತರ ಪ್ರದೇಶ): ಜ್ಞಾನವಾಪಿ ಮಸೀದಿಯನ್ನು ಬೃಹತ್ ದೇಗುಲವನ್ನು ಧ್ವಂಸಗೊಳಿಸಿ ಕಟ್ಟಲಾಗಿತ್ತು ಎಂದು ಕಾಶಿ ವಿಶ್ವನಾಥ-ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರು ಹೇಳಿದ್ದಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ವೈಜ್ಞಾನಿಕ ವರದಿಯ ಅಂಶಗಳನ್ನು ಅವರು ಬಹಿರಂಗಪಡಿಸಿದರು.

ವಕೀಲ ವಿಷ್ಣು ಶಂಕರ್ ಜೈನ್ ಮಾತನಾಡಿ, "ಈ ಕುರಿತ 839 ಪುಟಗಳ ವರದಿಯ ಪ್ರತಿಯನ್ನು ಸಂಬಂಧಪಟ್ಟ ಪಕ್ಷಗಾರರಿಗೆ ಕೋರ್ಟ್‌ ಮೂಲಕ ಗುರುವಾರ ಸಂಜೆ ಒದಗಿಸಲಾಗಿದೆ. ಈ ವರದಿಯಲ್ಲಿ, ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಮಸೀದಿಯನ್ನು 17 ಶತಮಾನದಲ್ಲಿ ಮೊಘಲ್ ರಾಜ ಔರಂಗಜೇಬನ ಕಾಲದಲ್ಲಿ ಬೃಹತ್‌ ದೇಗುಲ ಧ್ವಂಸ ಮಾಡಿ ಕಟ್ಟಿರುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ" ಎಂದು ತಿಳಿಸಿದರು.

"ಈಗ ಮಸೀದಿ ಇರುವ ಸ್ಥಳದಲ್ಲಿ ದೇಗುಲ ಇತ್ತು ಎನ್ನುವುದನ್ನು ಹೇಳಲು ವರದಿಯಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ. ಸರ್ವೇ ಸಂದರ್ಭದಲ್ಲಿ, ಮಸೀದಿಯ ನೆಲ ಮಹಡಿಯಲ್ಲಿ ಹಿಂದೂ ದೇವರುಗಳ ವಿಗ್ರಹಗಳು ದೊರೆತಿವೆ. ಈ ಹಿಂದೆ ಇದೇ ಸ್ಥಳದಲ್ಲಿದ್ದ ದೇಗುಲದ ಪಿಲ್ಲರ್‌ಗಳನ್ನು ಬಳಸಿ ಮಸೀದಿ ಕಟ್ಟಿರುವುದು ತಿಳಿದು ಬರುತ್ತದೆ" ಎಂದು ವರದಿಯಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ವಿವರಿಸಿದರು.

ಮುಂದುವರೆದು ಮಾತನಾಡಿದ ಅವರು, "ದೇಗುಲವನ್ನು ಧ್ವಂಸಗೊಳಿಸಿರುವುದು ಮತ್ತು ಮಸೀದಿಯನ್ನು ಕಟ್ಟಿರುವ ಕಾಲಾನುಕ್ರಮದ ಕುರಿತ ಸಂಗತಿಗಳನ್ನು ಕಲ್ಲಿನಲ್ಲಿ ಪರ್ಶಿಯನ್ ಭಾಷೆಯಲ್ಲಿ ಕೆತ್ತಲಾಗಿದೆ. 'ಮಹಾಮುಕ್ತಿ' ಎಂದು ಬರೆದಿರುವ ಕಲ್ಲು ಕೂಡಾ ಇದೇ ಜಾಗದಲ್ಲಿ ದೊರೆತಿದೆ" ಎಂದು ಜೈನ್ ಹೇಳಿದರು.

ಇದೇ ವೇಳೆ, "ಮಸೀದಿಯ ಬೇಸ್‌ಮೆಂಟ್‌ನಲ್ಲಿರುವ ಮೇಲ್ಛಾವಣಿಯನ್ನು ನಾಗರ ಶೈಲಿಯಲ್ಲಿರುವ ದೇಗುಲದ ಪಿಲ್ಲರ್‌ಗಳನ್ನು ಬಳಸಿ ನಿರ್ಮಿಸಲಾಗಿದೆ ಎಂದು ASI ವರದಿ ಹೇಳುತ್ತದೆ. ಈ ಸಾಕ್ಷ್ಯಗಳು 17ನೇ ಶತಮಾನದಲ್ಲಿ ಔರಂಗಜೇಬ ಬೃಹತ್ ಆದೀಶ್ವರ ದೇಗುಲವನ್ನು ಧ್ವಂಸಗೊಳಿಸಿರುವುದನ್ನು ಸ್ಪಷ್ಟಪಡಿಸುತ್ತವೆ" ಎಂದು ಜೈನ್‌ ವಿವರಿಸಿದರು.

"ಮಸೀದಿಯಲ್ಲಿ ನಮಾಜ್‌ಗಿಂತ ಮೊದಲು ಶುಚಿಗೊಳಿಸುವ ಪ್ರದೇಶ ವಜು ಖಾನಾದ ಸರ್ವೇಯನ್ನೂ ಮಾಡುವಂತೆ ನಾವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತೇವೆ" ಎಂದು ಇದೇ ವೇಳೆ ಮಾಹಿತಿ ನೀಡಿದರು.

"ಮುಂದಿನ ವಿಚಾರಣೆ ನಡೆಯುವ ಫೆಬ್ರವರಿ 6ರಂದು ನಡೆಯಲಿದೆ. ಈ ವರದಿಯ ಸಾಕ್ಷ್ಯಗಳನ್ನು ಇಟ್ಟುಕೊಂಡು ನಾವು ನಮ್ಮ ವಾದ ಮಂಡಿಸುತ್ತೇವೆ" ಎಂದು ವಕೀಲ ಜೈನ್ ತಿಳಿಸಿದರು.

ಈ ಬೆಳವಣಿಗೆಗೂ ಮುನ್ನ ಗುರುವಾರ ಬೆಳಿಗ್ಗೆ ಹಿಂದೂ ಮತ್ತು ಮುಸ್ಲಿಂ ಪರವಾಗಿರುವ 11 ಮಂದಿ ಜ್ಞಾನವಾಪಿ ಮಸೀದಿಯ ಎಎಸ್‌ಐ ಸರ್ವೇ ವರದಿ ಪಡೆಯಲು ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಗ್ಯಾನವಾಪಿ ಮಸೀದಿ ಬಗ್ಗೆ ಮಾತನಾಡಿದ್ದಕ್ಕಾಗಿ ಬಿಜೆಪಿ ನಾಯಕಿಗೆ ಜೀವ ಬೆದರಿಕೆ

Last Updated : Jan 26, 2024, 8:55 AM IST

ABOUT THE AUTHOR

...view details