ಈರೋಡ್ (ತಮಿಳುನಾಡು):ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿರುವಾಗಲೇ ದಿಢೀರ್ ಎದೆ ಹಿಡಿದುಕೊಂಡು ಕುಸಿದುಬಿದ್ದ ಶಿಕ್ಷಕ ಹೃದಯಸ್ತಂಭನ(cardiac arrest)ದಿಂದ ಸಾವನ್ನಪ್ಪಿದ ಘಟನೆ ತಮಿಳುನಾಡಿನ ಸುಂದಪುರ್ ಜಿಲ್ಲೆಯ ಪಂಚಾಯತ್ ಯೂನಿಯನ್ ಮಾಧ್ಯಮಿಕ ಶಾಲೆಯಲ್ಲಿ ನಡೆದಿದೆ.
49 ವರ್ಷದ ಆಂಟೋನಿ ಗೆರಾಲ್ಡ್ ಸಾವನ್ನಪ್ಪಿದ ಶಿಕ್ಷಕ. ಬೂದಪಡ್ಡಿ ಗ್ರಾಮದ ನಿವಾಸಿಯಾಗಿದ್ದ ಶಿಕ್ಷಕ ಬುಧವಾರ ಎಂದಿನಿಂದ ಶಾಲೆಗೆ ಆಗಮಿಸಿ, ಪಾಠ-ಪ್ರವಚನದಲ್ಲಿ ಮಗ್ನರಾಗಿದ್ದರು. ನಾಲ್ಕನೇ ತರಗತಿ ಮಕ್ಕಳಿಗೆ ಪಾಠ ಮಾಡುವಾಗ ದಿಢೀರ್ ಎದೆ ನೋವು ಕಾಣಿಸಿಕೊಂಡಿದ್ದರಿಂದ ತಕ್ಷಣಕ್ಕೆ ಕುಸಿದುಬಿದ್ದ ಅವರು ಸಾವನ್ನಪ್ಪಿದ್ದಾರೆ.
ಶಿಕ್ಷಕರು ಎದೆ ಹಿಡಿದುಕೊಂಡು ಕುಸಿದಿದ್ದರಿಂದ ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು ತಕ್ಷಣಕ್ಕೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ಬಳಿಕ ಅವರು ಹೃದಯಸ್ತಂಭನದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಗುರುವಾರ ಮೃತ ಶಿಕ್ಷಕನಿಗೆ ಶಾಲಾ ಸಿಬ್ಬಂದಿ ಮತ್ತು ಪೋಷಕರು ಅಂತಿಮ ಗೌರವ ನಮನ ಸಲ್ಲಿಸಿದರು. ಕಳೆದ ಏಳು ವರ್ಷದಿಂದ ಆಂಟೋನಿ ಈ ಶಾಲೆಯಲ್ಲಿ ಶಿಕ್ಷಕ ವೃತ್ತಿ ನಿಭಾಯಿಸುತ್ತಿದ್ದು, ಮಕ್ಕಳ ಜ್ಞಾನಾಭಿವೃದ್ಧಿಗೆ ಅವರ ಕೊಡುಗೆ ಅಪಾರ ಎಂದು ಶಾಲೆ ಸ್ಮರಿಸಿದೆ.