ಮುಂಬೈ: ಸಿಂಧುದುರ್ಗ್ ಎಂಬಲ್ಲಿ ಕುಸಿದುಬಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಸ್ಥಳದಲ್ಲೇ ಅದಕ್ಕಿಂತ ದುಪ್ಪಟ್ಟು ಗಾತ್ರದ ಹೊಸ ಪ್ರತಿಮೆ ನಿರ್ಮಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದ್ದು, ಟೆಂಡರ್ ಆಹ್ವಾನಿಸಿದೆ.
ಹೊಸ ಪ್ರತಿಮೆಯನ್ನು 60 ಅಡಿ ಎತ್ತರದಲ್ಲಿ 20 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಈ ಕಾರ್ಯ ಪೂರ್ಣಗೊಳ್ಳಲು ಆರು ತಿಂಗಳ ಗಡುವು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಕುಸಿದು ಬಿದ್ದ ಕಂಚಿನ ಪ್ರತಿಮೆ 35 ಅಡಿ ಎತ್ತರವಿತ್ತು. ಸಿಂಧುದುರ್ಗ್ ಜಿಲ್ಲೆಯ ರಾಜ್ಕೋಟ್ ಕೋಟೆಯ ಮಲ್ವಾನ್ ತೆಹ್ಸಿಲ್ನಲ್ಲಿ ನಿರ್ಮಾಣ ಮಾಡಲಾಗಿತ್ತು. ಕಳೆದ ವರ್ಷದ ನೌಕಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು. ಆಗಸ್ಟ್ 26ರಂದು ಭಾರಿ ಗಾಳಿಗೆ ಪ್ರತಿಮೆ ಧರೆಗುರುಳಿತ್ತು.
ಪ್ರತಿಮೆ ಕುಸಿತ ಪ್ರಕರಣ ರಾಜಕೀಯ ಜಟಾಪಟಿಗೂ ಕಾರಣವಾಗಿತ್ತು. ಪ್ರತಿಮೆ ನಿರ್ಮಾಣ ಕೆಲಸದಲ್ಲಿ ವ್ಯಾಪಕ ಅವ್ಯವಹಾರ ನಡೆಸಲಾಗಿದೆ ಎಂಬ ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಲ್ವಾನ್ ಪೊಲೀಸರು ಶಿಲ್ಪಿ ಆಪ್ಟೆ ಮತ್ತು ಅವರ ಸಲಹೆಗಾರ ಚೇತನ್ ಪಾಟೀಲ್ ಎಂಬಿಬ್ಬರನ್ನು ಬಂಧಿಸಿತ್ತು.
ಪ್ರತಿಮೆ ನಿರ್ಮಾಣ ಕಾರ್ಯ ಕಳಪೆಯಾಗಿದೆ ಎಂದು ಸಿಎಂ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡು ಪ್ರತಿಪಕ್ಷಗಳು ಟೀಕಾಪ್ರಹಾರ ನಡೆಸಿದ್ದವು. ಅಷ್ಟೇ ಅಲ್ಲದೇ, ಶಿವಾಜಿ ಮಹಾರಾಜರ ಪ್ರತಿಮೆ ತುಕ್ಕು ಹಿಡಿಯುತ್ತಿರುವ ಬಗ್ಗೆ ಮಹಾರಾಷ್ಟ್ರ ಲೋಕೋಪಯೋಗಿ ಇಲಾಖೆ ಕೂಡ ಕಳವಳ ವ್ಯಕ್ತಪಡಿಸಿತ್ತು. ಪ್ರತಿಮೆ ಕುಸಿಯುವ ಆರು ದಿನಕ್ಕೂ ಮುನ್ನ ಈ ಸಂಬಂಧ ಶಾಶ್ವತ ಮುನ್ನೆಚ್ಚರಿಕೆಗೆ ನೌಕಾಧಿಕಾರಿಗಳು ಪತ್ರ ಬರೆದಿದ್ದರು.
ಇದೀಗ ಪ್ರತಿಮೆ ಕುಸಿದ ಸ್ಥಳದಲ್ಲೇ ಹೊಸದಾಗಿ 60 ಅಡಿಯ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಟೆಂಡರ್ ಕರೆದಿದೆ. 20 ಕೋಟಿ ರೂ ವೆಚ್ಚದಲ್ಲಿ ಕರೆಯಲಾಗಿರುವ ಈ ಟೆಂಡರ್ನಲ್ಲಿ ಇಂಜಿನಿಯರಿಂಗ್, ಪ್ರತಿಮೆ ಅಳವಡಿಕೆ ಮತ್ತು ನಿರ್ವಹಣಾ ಕಾರ್ಯಗಳು ಒಳಗೊಂಡಿವೆ.
ಇದನ್ನೂ ಓದಿ: ಶಿವಾಜಿ ಪ್ರತಿಮೆ ಕುಸಿತ ಪ್ರಕರಣ: ತಲೆಬಾಗಿ ಕ್ಷಮೆ ಕೋರುತ್ತೇನೆ ಎಂದ ಪ್ರಧಾನಿ