ನಾಗ್ಪುರ (ಮಹಾರಾಷ್ಟ್ರ): ಯಾವ ಪಕ್ಷ ಅಧಿಕಾರದಲ್ಲಿದ್ದರೂ ಅದರಿಂದ ದೂರವಿರಿ. ಸರ್ಕಾರ ವಿಷಕನ್ಯೆ ಇದ್ದಂತೆ, ಹೀಗಾಗಿ ಕೈಗಾರಿಕೋದ್ಯಮಿಗಳು ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತರಾಗಬಾರದು. ಯಾರೇ ಜೊತೆಗೆ ಹೋದರೂ ಇದು ಮುಳುಗಿಸುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ನಾಗ್ಪುರದಲ್ಲಿ ವಿದರ್ಭ ಆರ್ಥಿಕ ಅಭಿವೃದ್ಧಿ ಮಂಡಳಿ ಆಯೋಜಿಸಿದ್ದ 'ಅಮೇಜಿಂಗ್ ವಿದರ್ಭ, ಸೆಂಟ್ರಲ್ ಇಂಡಿಯಾ ಟೂರಿಸಂ' ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಸರ್ಕಾರವು 'ಲಾಡ್ಲಿ ಬೆಹ್ನಾ ಯೋಜನೆ'ಗೆ ವ್ಯವಸ್ಥೆ ಮಾಡಬೇಕಾಗಿರುವುದರಿಂದ ಯಾವಾಗ ಸಬ್ಸಿಡಿಗಳನ್ನು ಪಡೆಯುತ್ತೇವೆ ಎಂಬುದರ ಬಗ್ಗೆ ಉದ್ಯಮಿಗಳಿಗೆ ಸ್ಪಷ್ಟತೆ ಇಲ್ಲ. ಉದ್ಯಮಿಗಳು ಸಬ್ಸಿಡಿಗಾಗಿ ಕಾಯಬಾರದು. ಏಕೆಂದರೆ ಸಬ್ಸಿಡಿ ಯಾವಾಗ ಸಿಗುತ್ತದೆ ಎಂಬ ಬಗ್ಗೆ ಖಚಿತತೆ ಇಲ್ಲ ಎಂದರು.
ಯುವಕನೊಬ್ಬ ತನ್ನ 450 ಕೋಟಿ ರೂ.ಗಳ ಯೋಜನೆಗೆ ಸಬ್ಸಿಡಿ ಬೇಕು ಮತ್ತು ಯಾವಾಗ ಸಬ್ಸಿಡಿ ಸಿಗುತ್ತದೆ ಎಂದು ನನ್ನನ್ನು ಕೇಳಿದ. ಸಬ್ಸಿಡಿ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಭರವಸೆ ಇಲ್ಲ ಎಂದು ನಾನು ಅವನಿಗೆ ತಿಳಿಸಿದೆ. ‘ಲಾಡ್ಲಿ ಬೆಹ್ನಾ ಯೋಜನೆ’ ಈಗಷ್ಟೇ ಆರಂಭವಾಗಿದ್ದು, ಅದಕ್ಕೆ ಸಬ್ಸಿಡಿ ಹಣ ನೀಡಬೇಕಾಗಿದೆ. ವಿದ್ಯುತ್ ಸಬ್ಸಿಡಿ ಸಿಗದ ಕಾರಣ ಜವಳಿ ಉದ್ಯಮ ಮುಚ್ಚಿದೆ. ಹೀಗಾಗಿ ಉದ್ಯಮಿಗಳೇ ಸ್ವತಃ ಯೋಜನೆಗಳನ್ನು ರೂಪಿಸುವುದು ಉತ್ತಮ ಕೆಲಸ ಎಂದು ಸಲಹೆ ನೀಡಿದರು.