ಕರ್ನಾಟಕ

karnataka

ETV Bharat / bharat

ಅಜಿತ್ ಬಣದ ಎನ್​ಸಿಪಿಗೂ ಹೊಸ ಚಿಹ್ನೆ ನೀಡಿ: ಸುಪ್ರೀಂ ಕೋರ್ಟ್​ಗೆ ಶರದ್ ಪವಾರ್ ಬಣದ ಅರ್ಜಿ - NCP Symbol Issue - NCP SYMBOL ISSUE

ಅಜಿತ್ ಪವಾರ್​ ಎನ್​ಸಿಪಿ ಬಣಕ್ಕೆ ಹೊಸ ಚುನಾವಣಾ ಚಿಹ್ನೆ ನೀಡುವಂತೆ ಕೋರಿ ಶರದ್ ಪವಾರ್ ಬಣ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.

ಅಜಿತ್ ಪವಾರ್, ಶರದ್ ಪವಾರ್
ಅಜಿತ್ ಪವಾರ್, ಶರದ್ ಪವಾರ್ (IANS)

By PTI

Published : Sep 22, 2024, 1:12 PM IST

ಪುಣೆ: ಅಜಿತ್ ಪವಾರ್ ನೇತೃತ್ವದ ಎನ್​ಸಿಪಿ ಬಣಕ್ಕೂ ಹೊಸ ಚುನಾವಣಾ ಚಿಹ್ನೆ ನೀಡುವಂತೆ ಶರದ್ ಪವಾರ್ ನೇತೃತ್ವದ ಎನ್​ಸಿಪಿ (ಎಸ್​ಪಿ) ಆಗ್ರಹಿಸಿದೆ.

ಎನ್​ಸಿಪಿಯ ಎರಡೂ ಬಣಗಳನ್ನು ಸಮಾನವಾಗಿ ಪರಿಗಣಿಸುವಂತೆ ಮತ್ತು ತಮ್ಮ ಪಕ್ಷಕ್ಕೆ ಹೊಸ ಚುನಾವಣಾ ಚಿಹ್ನೆಯನ್ನು ನೀಡಿದಂತೆ, ಅಜಿತ್ ಪವಾರ್ ನೇತೃತ್ವದ ಗುಂಪಿಗೂ ಅದೇ ನಿಯಮವನ್ನು ಅನುಸರಿಸಿ ಅದಕ್ಕೂ ಹೊಸ ಚುನಾವಣಾ ಚಿಹ್ನೆಯನ್ನು ನೀಡಬೇಕೆಂದು ಕೋರಿ ಎನ್​ಸಿಪಿ (ಎಸ್​ಪಿ) ನಾಯಕಿ ಸುಪ್ರಿಯಾ ಸುಳೆ ಅವರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಸಹಜ ನ್ಯಾಯದ ನಿಯಮವನ್ನು ಜಾರಿ ಮಾಡುವಂತೆ ಎನ್​ಸಿಪಿ (ಎಸ್​​ಪಿ) ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದೆ ಎಂದು ಲೋಕಸಭಾ ಸದಸ್ಯೆ ಸುಳೆ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ನವೆಂಬರ್​ನಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಎನ್​ಸಿಪಿ (ಎಸ್​ಪಿ) ಈ ಬೇಡಿಕೆ ಮಂಡಿಸಿರುವುದು ಗಮನಾರ್ಹ. ಅಜಿತ್ ಪವಾರ್ ಮತ್ತು ಇತರ ಅನೇಕ ಶಾಸಕರು ಮೂಲ ಎನ್​ಸಿಪಿ ಪಕ್ಷದಿಂದ ಹೊರಬಂದು ಜುಲೈ 2023ರಲ್ಲಿ ಶಿವಸೇನೆ-ಬಿಜೆಪಿ ಸರ್ಕಾರವನ್ನು ಸೇರಿಕೊಂಡಿದ್ದರು. ಇದರಿಂದ ಅವರ ಚಿಕ್ಕಪ್ಪ ಶರದ್ ಪವಾರ್ ಸ್ಥಾಪಿಸಿದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ)ವು ಇಬ್ಭಾಗವಾಗಿತ್ತು.

ಶರದ್ ಪವಾರ್ ಸ್ಥಾಪಿಸಿದ ಎನ್​​ಸಿಪಿ ವಿಭಜನೆಗೆ ಮೊದಲು 'ಗಡಿಯಾರ'ವನ್ನು ತನ್ನ ಚುನಾವಣಾ ಚಿಹ್ನೆಯಾಗಿ ಹೊಂದಿತ್ತು. ಆದರೆ ಈ ವರ್ಷದ ಫೆಬ್ರವರಿಯಲ್ಲಿ ಚುನಾವಣಾ ಆಯೋಗವು ಅಜಿತ್ ಪವಾರ್ ನೇತೃತ್ವದ ಗುಂಪಿಗೆ ಎನ್​​ಸಿಪಿ ಹೆಸರು ಮತ್ತು 'ಗಡಿಯಾರ' ಚಿಹ್ನೆಯನ್ನು ನೀಡಿತ್ತು.

ನಂತರ ಮಾರ್ಚ್ 19ರಂದು, ಲೋಕಸಭಾ ಚುನಾವಣೆಗೆ ಮುಂಚಿತವಾಗಿ 'ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ-ಶರದ್ ಚಂದ್ರ ಪವಾರ್' ಎಂಬ ಹೆಸರನ್ನು ತನ್ನ ಹೆಸರಾಗಿ ಮತ್ತು 'ತುತ್ತೂರಿ ಊದುತ್ತಿರುವ ಮನುಷ್ಯ' ಚಿಹ್ನೆಯನ್ನು ತನ್ನ ಚಿಹ್ನೆಯಾಗಿ ಬಳಸಲು ಸುಪ್ರೀಂ ಕೋರ್ಟ್ ಶರದ್ ಪವಾರ್ ಬಣಕ್ಕೆ ಅನುಮತಿ ನೀಡಿತ್ತು. ಅಜಿತ್ ಪವಾರ್ ಬಣಕ್ಕೆ ಚುನಾವಣಾ ಆಯೋಗವು ನಿಗದಿಪಡಿಸಿದ 'ಗಡಿಯಾರ' ಚಿಹ್ನೆಯನ್ನು ಅದು ಚುನಾವಣೆಯಲ್ಲಿ ಬಳಸದಂತೆ ತಡೆಯಬೇಕೆಂದು ಕೋರಿ ಶರದ್ ಪವಾರ್ ಗುಂಪು ಸಲ್ಲಿಸಿದ್ದ ಮನವಿಯ ಮೇರೆಗೆ ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿತ್ತು.

ತದನಂತರ ಈಗ ಎನ್​ಸಿಪಿಯ ಎರಡೂ ಬಣಗಳಿಗೆ ಹೊಸ ಚುನಾವಣಾ ಚಿಹ್ನೆಗಳನ್ನು ನೀಡುವಂತೆ ಕೋರಿ ಶರದ್ ಪವಾರ್ ನೇತೃತ್ವದ ಪಕ್ಷವು ಶುಕ್ರವಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಸೆಪ್ಟೆಂಬರ್ 25ರಂದು ಸುಪ್ರೀಂ ಕೋರ್ಟ್​ನಲ್ಲಿ ಈ ಮನವಿಯ ವಿಚಾರಣೆ ನಡೆಯಲಿದೆ.

ಶನಿವಾರ ಪುಣೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ, "ಶರದ್ ಪವಾರ್ ನಮ್ಮ ಪಕ್ಷದ ಸ್ಥಾಪಕ ಸದಸ್ಯರು ಮತ್ತು ಪಕ್ಷದ ಎಲ್ಲಾ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಾರೆ. ನಮಗೆ ಸಹಜ ನ್ಯಾಯ ಒದಗಿಸುವಂತೆ ಎನ್​ಸಿಪಿ (ಎಸ್​ಪಿ) ಸುಪ್ರೀಂ ಕೋರ್ಟ್​ಗೆ ಮನವಿ ಮಾಡಿದೆ. ಅಂತಿಮ ತೀರ್ಪು ಬರುವವರೆಗೂ 'ತುತ್ತೂರಿ ಊದುತ್ತಿರುವ ಮನುಷ್ಯ' ಚಿಹ್ನೆಯನ್ನು ಬಳಸುವಂತೆ ನ್ಯಾಯಾಲಯ ನಮಗೆ ಸೂಚಿಸಿದೆ. ಇಂಥದೇ ನಿರ್ಧಾರವನ್ನು ಮತ್ತೊಂದು ಎನ್​ಸಿಪಿ ಬಣಕ್ಕೂ ಅನ್ವಯಿಸಬೇಕು. ಸದ್ಯ 'ಗಡಿಯಾರ' ಚಿಹ್ನೆಯ ಬಗ್ಗೆ ದೊಡ್ಡ ಗೊಂದಲ ಉಂಟಾಗಿದೆ. ಹೀಗಾಗಿ, ಮುಂಬರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ಬಗ್ಗೆ ನಿರ್ಧಾರ ಪ್ರಕಟಿಸುವಂತೆ ನಾವು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ" ಎಂದು ಹೇಳಿದರು.

ಇದನ್ನೂ ಓದಿ: ಸಿಲಿಂಡರ್​ ಇಟ್ಟು ರೈಲು ಹಳಿ ತಪ್ಪಿಸುವ ಮತ್ತೊಂದು ಯತ್ನ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ - Another Attempt To Derail Train

ABOUT THE AUTHOR

...view details