ಜೆಹಾನಾಬಾದ್ (ಬಿಹಾರ) :ಬಿಹಾರದ ಜೆಹಾನಾಬಾದ್‌ನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಶಾಲಾ ಬ್ಯಾಗ್‌ನಲ್ಲಿ ಗನ್ ಇಟ್ಟುಕೊಂಡು ಶಾಲೆ ಪ್ರವೇಶಿಸಿ ಭೀತಿ ಸೃಷ್ಟಿಸಿದ್ದಾರೆ. ಇದನ್ನು ನೋಡಿದ ಕೂಡಲೇ ಇನ್ನಿತರ ವಿದ್ಯಾರ್ಥಿನಿಯರು ಹೆದರಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಂದ ಆರಕ್ಷಕರು ವಿದ್ಯಾರ್ಥಿನಿಯರಿಂದ ಪಿಸ್ತೂಲ್ ವಶಕ್ಕೆ ಪಡೆದುಕೊಂಡಿದ್ದಾರೆ.
ಶಾಲೆಯಲ್ಲಿ ಶಸ್ತ್ರಾಸ್ತ್ರಗಳು : ಕರ್ಪಿ ಪ್ರೌಢಶಾಲೆಯಲ್ಲಿ ಓದುತ್ತಿರುವ 9ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಶಾಲಾ ಬ್ಯಾಗ್‌ನಲ್ಲಿ ಪಿಸ್ತೂಲ್ನೊಂದಿಗೆ ಆಗಮಿಸಿದ್ದರು. ಈ ವಿಷಯ ತಿಳಿದ ತಕ್ಷಣ ಕೆಲ ವಿದ್ಯಾರ್ಥಿನಿಯರು ಮುಖ್ಯೋಪಾಧ್ಯಾಯರಿಗೆ ದೂರು ನೀಡಿದರು. ವಿದ್ಯಾರ್ಥಿನಿಯರ ದೂರು ಆಧರಿಸಿ, ಆರೋಪಿತ ವಿದ್ಯಾರ್ಥಿನಿಯರ ಬ್ಯಾಗ್ಗಳನ್ನು ತಪಾಸಣೆ ಮಾಡಲಾಯಿತು. ಆಗ ತಕ್ಷಣಕ್ಕೆ ಪಿಸ್ತೂಲ್ ಸಿಕ್ಕಿರಲಿಲ್ಲ.
ತನಿಖೆಗೆ ಎಸ್ಪಿ ಆದೇಶ :ಹೀಗಾಗಿ ಮುಖ್ಯೋಪಾದ್ಯಾಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವಿಚಾರ ತಿಳಿದ ಪೊಲೀಸರು ತಕ್ಷಣ ಶಾಲೆಗೆ ಆಗಮಿಸಿ ವಿದ್ಯಾರ್ಥಿನಿಯರಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಜಿಲ್ಲೆಯ ತೇಲ್ಪಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟೇ ಅಲ್ಲ ಈ ಘಟನೆಯ ತನಿಖೆಗೆ ಅಲ್ಲಿನ ಎಸ್ಪಿ ಆದೇಶಿಸಿದ್ದಾರೆ.
"ವಿದ್ಯಾರ್ಥಿನಿಯರಿಂದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ನಗರದ ತೇಲ್ಪಾ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ" ಎಂದು ಅರ್ವಾಲ್ ಎಸ್ಪಿ ರಾಜೇಂದ್ರ ಕುಮಾರ್ ಭಿಲ್ ತಿಳಿಸಿದ್ದಾರೆ.
ಬೆದರಿಕೆ ಹಾಕಲು ಪಿಸ್ತೂಲ್ ಹಿಡಿದು ಶಾಲೆ ಬಂದ ವಿದ್ಯಾರ್ಥಿನಿ : ವಿದ್ಯಾರ್ಥಿನಿಯರಿಬ್ಬರೂ 7.64 ಎಂಎಂ ಪಿಸ್ತೂಲ್ ಹಿಡಿದು ಶಾಲೆಗೆ ಆಗಮಿಸಿ ಬೆದರಿಕೆ ಹಾಕಿದ್ದಾರೆ ಎಂಬುದು ತಿಳಿದು ಬಂದಿದೆ. ತರಗತಿಯಲ್ಲಿ ವಿದ್ಯಾರ್ಥಿನಿಯೊಬ್ಬರು ಪಿಸ್ತೂಲ್ ತೆಗೆದ ತಕ್ಷಣ ಅಲ್ಲಿದ್ದ ವಿದ್ಯಾರ್ಥಿಗಳಲ್ಲಿ ಆತಂಕ ಮನೆ ಮಾಡಿತ್ತು. ಅದೃಷ್ಟವಶಾತ್ ಪಿಸ್ತೂಲಿನಲ್ಲಿ ಬುಲೆಟ್ ಇರಲಿಲ್ಲ. ಈ ಮಧ್ಯೆ, ಸುದ್ದಿ ತರಗತಿಯ ಹೊರಗೆ ಹರಡುತ್ತಿದ್ದಂತೆ ವಿದ್ಯಾರ್ಥಿನಿಯೊಬ್ಬರು ತನ್ನ ಇನ್ನೊಬ್ಬ ಸ್ನೇಹಿತೆಯ ಬ್ಯಾಗ್‌ನಲ್ಲಿ ಪಿಸ್ತೂಲ್ ಇಟ್ಟು ಮನೆಗೆ ಕಳುಹಿಸಿದ್ದರು. ಹೀಗಾಗಿ ಮುಖ್ಯೋಪಾಧ್ಯಾಯರು ಬ್ಯಾಗ್ ಹುಡುಕಿದಾಗ ಪಿಸ್ತೂಲ್ ಪತ್ತೆಯಾಗಿರಲಿಲ್ಲ. ಆ ಬಳಿಕ ಪೊಲೀಸರು, ತಮ್ಮ ಭಾಷೆಯಲ್ಲೇ ವಿಚಾರಣೆ ನಡೆಸಿದಾಗ, ವಿದ್ಯಾರ್ಥಿನಿ ಪಿಸ್ತೂಲ್ ತಂದಿದ್ದಾಗಿ ಒಪ್ಪಿಕೊಂಡಿದ್ದಾಳೆ.
ವಿದ್ಯಾರ್ಥಿನಿ ನೀಡಿದ ಮಾಹಿತಿ ಮೆರೆಗೆ ಆಕೆಯ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಆ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಆದರೆ ವಿದ್ಯಾರ್ಥಿನಿಯರ ಕೈಗೆ ಪಿಸ್ತೂಲ್ ಸಿಕ್ಕಿದ್ದು ಹೇಗೆ ಎಂಬ ವಿಚಾರ ಆ ಭಾಗದಲ್ಲಿ ಭಾರಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಈ ಪ್ರಶ್ನೆಗೆ ಇದೀಗ ಪೊಲೀಸರು ಉತ್ತರ ಹುಡುಕುತ್ತಿದ್ದಾರೆ.
ಇದನ್ನೂ ಓದಿ :ಅಕ್ರಮ ಪಿಸ್ತೂಲ್ ಹೊಂದಿದ ಕೇರಳದ ಇಬ್ಬರ ಬಂಧಿಸಿದ ಮಂಗಳೂರು ಸಿಸಿಬಿ - MANGALURU CRIME