ನವದೆಹಲಿ:ಸುಮಾರು 18 ತಿಂಗಳುಗಳವರೆಗೆ ಕತಾರ್ ಜೈಲಿನಲ್ಲಿ ಬಂಧಿಯಾಗಿದ್ದ ಭಾರತೀಯ ನೌಕಾಪಡೆಯ 8 ಮಾಜಿ ಯೋಧರು ಬಿಡುಗಡೆಯಾಗಿ ಸ್ವದೇಶಕ್ಕೆ ಕಾಲಿಡುವ ಮೂಲಕ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬೇಹುಗಾರಿಕೆ ಆರೋಪದ ಮೇಲೆ ಭಾರತೀಯ ನೌಕಾಪಡೆಯ 8 ಮಾಜಿ ಯೋಧರಿಗೆ ಮರಣದಂಡನೆ ಶಿಕ್ಷೆಗೆ ಒಳಗಿದ್ದರು. ಈ ಪೈಕಿ ಏಳು ಮಾಜಿ ಸೈನಿಕರು ಸ್ವದೇಶಕ್ಕೆ ಮರಳಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ''ಪ್ರಧಾನಿ ಮೋದಿಯವರ ಸತತ ಪ್ರಯತ್ನದಿಂದ ತಮ್ಮ ಬಿಡುಗಡೆ ಸಾಧ್ಯವಾಗಿದೆ. ಪ್ರಧಾನಿ ಮೋದಿಯವರು ನಮ್ಮ ಬಿಡುಗಡೆಗೆ ಪ್ರಯತ್ನ ಮಾಡದೇ ಇದ್ದಿದ್ದರೆ, ಬಹುಶಃ ಇವತ್ತು ನಾವು ಇಲ್ಲಿಗೆ ಮರಳಲು ಸಾಧ್ಯವಾಗುತ್ತಿರಲಿಲ್ಲ'' ಎಂದು ಅವರು ತಿಳಿಸಿದರು.
'ಭಾರತ ಮಾತಾ ಕಿ ಜೈ' ಎಂದ ಮಾಜಿ ಸೈನಿಕರು:ಬಿಡುಗಡೆಯಾಗಿ ನಿರಾಳರಾದ ನೌಕಾಪಡೆಯ ಏಳು ಮಾಜಿ ಅಧಿಕಾರಿಗಳು ಸೋಮವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣವನ್ನು ತಲುಪಿದ ನಂತರ 'ಭಾರತ ಮಾತಾ ಕಿ ಜೈ' ಎಂದು ಘೋಷಣೆಗಳನ್ನು ಕೂಗಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರು ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಪ್ರಧಾನಿಯವರ ನಿರಂತರ ರಾಜತಾಂತ್ರಿಕ ಪ್ರಯತ್ನದ ನಂತರ ಮರಣದಂಡನೆ ಶಿಕ್ಷೆಯಿಂದ ಜೈಲು ಶಿಕ್ಷೆಗೆ ಬದಲಾಯಿಸಲಾಗಿದೆ.
ತಾಯ್ನಾಡಿಗೆ ಮರಳಿ ಸಂತಸ ವ್ಯಕ್ತಪಡಿಸಿದ ಮಾಜಿ ಯೋಧರು:''ಕತಾರ್ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಪ್ರಧಾನಿ ಮೋದಿ ಭಾರತೀಯರ ಯೋಗಕ್ಷೇಮದ ಬಗ್ಗೆ ಚರ್ಚಿಸಿದ್ದರು. ಅಂತಿಮವಾಗಿ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದೇವೆ. ನಮಗೆ ಸಮಾಧಾನ ಮತ್ತು ಸಂತೋಷ ಲಭಿಸಿದೆ. ನಾನು ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ನಮ್ಮ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಅವರ ವೈಯಕ್ತಿಕ ಮಾತುಕತೆ, ಸಂಪರ್ಕ ಇಲ್ಲದೇ ಇದ್ದಿದ್ದರೆ ನಮ್ಮ ಬಿಡುಗಡೆ ಸಾಧ್ಯವಾಗುತ್ತಿರಲಿಲ್ಲ'' ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.