ಗಡ್ಚಿರೋಲಿ:ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಇಂದು ಪೊಲೀಸರು ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ನಕ್ಸಲೀಯರು ಹತರಾಗಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ದುಷ್ಕೃತ್ಯಕ್ಕೆ ಸಂಚು ರೂಪಿಸಲು ನೆರೆ ರಾಜ್ಯ ತೆಲಂಗಾಣದಿಂದ ಮಾವೋವಾದಿಗಳು ಮಹಾರಾಷ್ಟ್ರ ಪ್ರವೇಶಿಸಿರುವುದಾಗಿ ಸೋಮವಾರ ಮಧ್ಯಾಹ್ನ ಪೊಲೀಸರಿಗೆ ಮಾಹಿತಿ ಅಭಿಸಿತ್ತು. ಕೂಡಲೇ ಸಿ-60 ಕಮಾಂಡೋಗಳು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಜಂಟಿ ಶೋಧ ಕಾರ್ಯ ನಡೆಸಿವೆ. ಇಂದು ಬೆಳಗ್ಗೆ ರೆಪನ್‌ಪಲ್ಲಿ ಸಮೀಪದ ಕೋಲಮಾರ್ಕ ಪರ್ವತಗಳಲ್ಲಿ ಶೋಧ ನಡೆಸುತ್ತಿದ್ದಾಗ ಪೊಲೀಸರ ಮೇಲೆ ಅಲ್ಲೇ ಅಡಗಿದ್ದ ನಕ್ಸಲೀಯರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ದಾಳಿ ನಡೆಸಿವೆ.
ಈ ಗುಂಡಿನ ಕಾಳಗದಲ್ಲಿ ಪೊಲೀಸರ ಗುಂಡೇಟಿಗೆ ನಾಲ್ವರು ನಕ್ಸಲೀಯರು ಸಾವನ್ನಪ್ಪಿದ್ದಾರೆ. ಚಕಮಕಿ ನಿಂತ ಬಳಿಕ ಶೋಧ ನಡೆಸಿದ ಪೊಲೀಸರಿಗೆ ನಾಲ್ವರ ಮೃತದೇಹಗಳು ಸಿಕ್ಕಿವೆ. ಮೃತ ನಕ್ಸಲರಿಂದ ಎಕೆ 47 ಬಂದೂಕು, ಕಾರ್ಬೈನ್, ಎರಡು ನಾಡ ಪಿಸ್ತೂಲ್ ಸೇರಿದಂತೆ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.