ಹೈದರಾಬಾದ್:ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ಕಾರ್ಯಕಾರಿ ಅಧ್ಯಕ್ಷ, ಶಾಸಕ ಮತ್ತು ಮಾಜಿ ಸಚಿವ ಕೆ.ಟಿ.ರಾಮರಾವ್ (ಕೆಟಿಆರ್) ಸೋಮವಾರ ಹೈದರಾಬಾದಿನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. 2023ರ ಫೆಬ್ರವರಿಯಲ್ಲಿ ಹೈದರಾಬಾದಿನಲ್ಲಿ ನಡೆದ ಫಾರ್ಮುಲಾ-ಇ ರೇಸ್ಗೆ ಸಂಬಂಧಿಸಿದಂತೆ ಕೆಟಿಆರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಎಎನ್ಐ ಜೊತೆ ಮಾತನಾಡಿದ ಕೆ.ಟಿ.ರಾಮರಾವ್, "ವಿಚಾರಣೆಯ ಸಮಯದಲ್ಲಿ ತನ್ನೊಂದಿಗೆ ವಕೀಲರನ್ನು ಜೊತೆಯಾಗಿ ಇರಿಸಿಕೊಳ್ಳಲು ಎಸಿಬಿ ಅವಕಾಶ ನೀಡುತ್ತಿಲ್ಲ" ಎಂದು ಆರೋಪಿಸಿದರು.
"ಕಾನೂನು ಪಾಲಿಸುವ ನಾಗರಿಕನಾಗಿರುವ ನಾನು ಹೈಕೋರ್ಟ್ ಅನ್ನು ಗೌರವಿಸುತ್ತೇನೆ. ತನ್ನ ಮುಂದೆ ಹಾಜರಾಗುವಂತೆ ಸೂಚಿಸಿದ ಭ್ರಷ್ಟಾಚಾರ ನಿಗ್ರಹ ದಳದ ಆದೇಶವನ್ನೂ ಗೌರವಿಸುತ್ತೇನೆ. ಆದರೆ ಅವರು ವಕೀಲರು ನನ್ನ ಜೊತೆಗಿರಲು ಅವಕಾಶ ನೀಡುತ್ತಿಲ್ಲ. ನನ್ನ ಹಕ್ಕುಗಳನ್ನು ಪಡೆಯಲು ನನಗೆ ಅವಕಾಶ ನೀಡುತ್ತಿಲ್ಲ. ಭ್ರಷ್ಟಾಚಾರ ನಿಗ್ರಹ ದಳ ಹೈಕೋರ್ಟ್ ತೀರ್ಪನ್ನು ಗೌರವಿಸಬೇಕು. ವಾಸ್ತವವಾಗಿ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಒಬ್ಬ ವ್ಯಕ್ತಿಯಾಗಿ ಮತ್ತು ನಾಗರಿಕನಾಗಿ ನನ್ನ ಹಕ್ಕುಗಳನ್ನು ರಕ್ಷಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ನಾನು ಎಸಿಬಿಗೆ ಮನವಿ ಮಾಡುತ್ತಿದ್ದೇನೆ. ನನ್ನ ವಕೀಲರನ್ನು ಜೊತೆಗಿರಿಸಿಕೊಳ್ಳುವ ಹಕ್ಕು ನನಗಿದೆ. ಆದರೆ ದುರದೃಷ್ಟವಶಾತ್ ಅವರ ನಿಲುವು ಬೇರೆಯಾಗಿದೆ. ನಾನು ಕಾನೂನನ್ನು ಪಾಲಿಸುವ ನಾಗರಿಕ. ಹೀಗಾಗಿಯೇ ಇಲ್ಲಿಗೆ ಬಂದಿದ್ದೇನೆ. ಆದರೆ ಅವರು ನನ್ನ ಹಕ್ಕುಗಳ ರಕ್ಷಣೆ ಮಾಡದಿದ್ದರೆ ವಿಚಾರಣೆಯಿಂದ ಹಿಂದೆ ಸರಿಯುವ ಹಕ್ಕು ನನಗಿದೆ" ಎಂದು ಕೆ.ಟಿ.ರಾಮರಾವ್ ಹೇಳಿದರು.