ರಾಂಚಿ (ಜಾರ್ಖಂಡ್):ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನವೇ ಜಾರ್ಖಂಡ್‌ನಲ್ಲಿ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಗಳು ಎದ್ದು ಕಾಣುತ್ತಿದೆ. ಜೆಎಂಎಂ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಇಂದು ಬಿಜೆಪಿಗೆ ಸೇರುವ ಸಾಧ್ಯತೆಯಿದೆ.
ಚಂಪೈ ಸೊರೆನ್ ಇಂದು ಬೆಳಗ್ಗೆ ರಾಷ್ಟ್ರ ರಾಜಧಾನಿಗೆ ತೆರಳಿರುವುದು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸೊರೆನ್ ಜೊತೆಗೆ ಜೆಎಂಎಂನಿಂದ ಉಚ್ಛಾಟಿತರಾಗಿರುವ ಮಾಜಿ ಶಾಸಕ ಲೋಬಿನ್ ಹೆಂಬ್ರೋಮ್ ಕೂಡ ಬಿಜೆಪಿ ಸೇರಲಿದ್ದಾರೆ. ಜೆಎಂಎಂನಿಂದ ಇನ್ನೂ ಕೆಲವು ಶಾಸಕರು ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳು ಎದ್ದಿವೆ.
ಪಕ್ಷಾಂತರದ ಬಗ್ಗೆ ಶನಿವಾರ ಪ್ರತಿಕ್ರಿಯಿಸಿದ್ದ ಚಂಪೈ ಸೊರೆನ್, ಅದರ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. "ಅಂತಹ ಊಹಾಪೋಹಗಳು ಮತ್ತು ವರದಿಗಳ ಬಗ್ಗೆ ನನಗೆ ಏನೂ ತಿಳಿದಿಲ್ಲ. ನಾನು ಇರುವ ಪಕ್ಷದಲ್ಲಿಯೇ ಇದ್ದೇನೆ" ಎಂದು ತಿಳಿಸಿದ್ದರು.
ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿರುವ ಲೋಬಿನ್ ಹೆಂಬ್ರೋಮ್ ಅವರೊಂದಿಗಿನ ಭೇಟಿಯಲ್ಲಿ ವಿಶೇಷವೇನಿಲ್ಲ. ''ಹೆಂಬ್ರೋಮ್ ನನ್ನನ್ನು ಭೇಟಿಯಾದರು. ಆದರೆ, ದಿನನಿತ್ಯದ ಆಗುಹೋಗುಗಳ ಬಗ್ಗೆ ಮಾತ್ರ ಚರ್ಚೆ ನಡೆಸಿದ್ದೇವೆ" ಎಂದು ಸೊರೆನ್ ತಿಳಿಸಿದ್ದರು. ಪಕ್ಷಾಂತರ ವಿರೋಧಿ ಕಾನೂನಿನ ಅಡಿ ಇತ್ತೀಚೆಗೆ ಜೆಎಂಎಂ ಶಾಸಕ ಸ್ಥಾನದಿಂದ ಹೆಂಬ್ರೋಮ್ ಅನರ್ಹಗೊಂಡಿದ್ದರು.
ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗುವ ಮುನ್ನ ಅಂದಿನ ಮುಖ್ಯಮಂತ್ರಿ ಹೇಮಂತ್ ಸೊರೆನ್, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಚಂಪೈ ಸೊರೆನ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಐದು ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ಹೇಮಂತ್ ಸೊರೆನ್ ಪುನಃ ಜಾರ್ಖಂಡ್ ಮುಖ್ಯಮಂತ್ರಿಯಾದರು. ಸಿಎಂ ಸ್ಥಾನದಿಂದ ಕೆಳಗಿಳಿಸಿರುವುದಕ್ಕೆ ಚಂಪೈ ಸೊರೆನ್ ಅತೃಪ್ತಗೊಂಡಿದ್ದಾರೆ ಎನ್ನಲಾಗಿದೆ. ವಿಧಾನಸಭೆ ಚುನಾವಣೆಯವರೆಗೂ ಕೂಡ ಮುಖ್ಯಮಂತ್ರಿಯಾಗಿ ಮುಂದುವರೆಯಬಹುದೆಂಬ ನಿರೀಕ್ಷೆಯಲ್ಲಿ ಅವರಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ, ಜಾರ್ಖಂಡ್‌ನಲ್ಲಿ ಬಿಜೆಪಿ ಚುನಾವಣಾ ಸಹ-ಪ್ರಭಾರಿಯಾಗಿರುವ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ಪಷ್ಟನೆಗೆ ನಿರಾಕರಿಸಿದರು. "ಚಂಪೈ ಸೊರೆನ್ ನನ್ನ ಸಂಪರ್ಕದಲ್ಲಿಲ್ಲ ಹಾಗೂ ನಮ್ಮ ಪಕ್ಷದ ಸಂಪರ್ಕದಲ್ಲಿಯೂ ಇಲ್ಲ. ಅವರ ಬಗ್ಗೆ ಕಾಮೆಂಟ್ ಮಾಡಲು ನಾನು ಬಯಸುವುದಿಲ್ಲ" ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
''ಜಾರ್ಖಂಡ್‌ನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ-ಕಾಂಗ್ರೆಸ್‌ನ ಐದು ವರ್ಷಗಳಲ್ಲಿ ಯಾವುದೇ ಕೆಲಸ ಮಾಡಿದ್ದರೂ, ಅದು ಚಂಪೈ ಸೊರೆನ್ ಅಧಿಕಾರದಲ್ಲಿದ್ದ 6 ತಿಂಗಳ ಅವಧಿಯಲ್ಲಿ ಮಾತ್ರ ಆಗಿದೆ. ಈಗ ಚಂಪೈ ಜಿ ಅವರ ಫೋಟೋಗಳು ಜಾಹೀರಾತುಗಳಿಂದಲೂ ಮಾಯವಾಗಿದೆ'' ಎಂದು ಅಸ್ಸೋಂ ಸಿಎಂ ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಜೆಎಂಎಂ ಕಾರ್ಯಕಾರಿ ಅಧ್ಯಕ್ಷ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಬಂಧಿಸಿತ್ತು. ಬಳಿಕ ಚಂಪೈ ಸೊರೆನ್ ಈ ವರ್ಷ ಫೆಬ್ರವರಿ 2ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆನಂತರ ಜೈಲಿನಿಂದ ಹೊರಬಂದ ಹೇಮಂತ್ ಸೊರೆನ್, ಜುಲೈ 4ರಂದು ಮರಳಿ ಜಾರ್ಖಂಡ್‌ನ ಮುಖ್ಯಮಂತ್ರಿ ಹುದ್ದೆಗೇರುವ ಒಂದು ದಿನ ಮುನ್ನ ಚಂಪೈ ರಾಜೀನಾಮೆ ಸಲ್ಲಿಸಿದ್ದರು.
2019ರಲ್ಲಿ, ಜೆಎಂಎಂ ಕಾಂಗ್ರೆಸ್ ಮತ್ತು ಲಾಲು ಪ್ರಸಾದ್ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಜೊತೆ ಮೈತ್ರಿ ಮಾಡಿಕೊಂಡು ವಿಧಾನಸಭೆ ಚುನಾವಣೆ ಎದುರಿಸಿತ್ತು. 81 ಸದಸ್ಯರ ಬಲದ ಸದನದಲ್ಲಿ 47 ಸ್ಥಾನಗಳೊಂದಿಗೆ ಬಹುಮತ ಪಡೆದಿತ್ತು.
ಇದನ್ನೂ ಓದಿ:ಪ್ರಾಸಿಕ್ಯೂಷನ್ ಖಂಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಕರೆ: ಡಿ.ಕೆ.ಶಿವಕುಮಾರ್ - PROTEST AGAINST PROSECUTION