ಮುಂಬೈ:ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮನೆಯಲ್ಲಿ ನಡೆದ ಗಣೇಶ ಆರತಿ ಕಾರ್ಯಕ್ರಮದಲ್ಲಿ ಅನೇಕ ದೇಶಗಳ ವಿದೇಶಿ ರಾಜತಾಂತ್ರಿಕರು ಭಾಗಿಯಾಗಿ ಗಮನ ಸೆಳೆದರು.
ಈ ಕುರಿತು ಮುಖ್ಯಮಂತ್ರಿ ಕೂಡ ಎಕ್ಸ್ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಗತ್ತಿನ ಅನೇಕ ದೇಶದ ರಾಯಭಾರಿಗಳು ಮತ್ತು ವಿದೇಶಾಂಗ ವ್ಯವಹಾರದ ಅಧಿಕಾರಿಗಳು ತಮ್ಮ ವರ್ಷ ನಿವಾಸದಲ್ಲಿ ನಡೆದ ಗಣೇಶ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಗಜಮುಖನಿಗೆ ನಮನ ಸಲ್ಲಿಸಿದರು ಎಂದು ತಿಳಿಸಿದ್ದಾರೆ.
ಸಂಸದ ಡಾ ಶ್ರೀಕಾಂತ್ ಶಿಂಥೆ, ಸಂಸದ ಮಿಲಿಂದ್ ಡಿಯೋರಾ, ಮಾಜಿ ಸಂಸದ ರಾಹುಲ್ ಶೆವಾಲೆ ಹಾಗೂ ಶಿಷ್ಟಾಚಾರ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೂಡ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ.
ಶ್ರೀಲಂಕಾ ರಾಯಭಾರಿ, ಮಾರಿಷಿಯಸ್, ಸ್ವೀಡನ್, ಸ್ವಿಟ್ಜರ್ಲ್ಯಾಂಡ್, ಯುಎಇ, ಯುಎಸ್ಎ, ಯೆಮೆನ್, ದಕ್ಷಿಣ ಕೊರಿಯಾ, ಚಿಲಿ, ಚೀನಾ, ಮೆಕ್ಸಿಕೊ, ಜರ್ಮನಿ, ಇಂಡೋನೇಷ್ಯಾ, ಇರಾಕ್, ಇರಾನ್, ಐರ್ಲೆಂಡ್, ಇಟಲಿ, ಅರ್ಜೆಂಟಿನಾ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಬಹ್ರೇನ್ ಮತ್ತು ಬೆಲಾರಸ್ ರಾಯಭಾರಿಗಳು ಭಾಗಿಯಾದರು. ಎಲ್ಲಾ ರಾಯಭಾರಿಗಳಿಗೆ ಆತ್ಮೀಯವಾಗಿ ಸ್ವಾಗತಿಸಿ ಮತ್ತು ಅವರನ್ನು ವಿಶೇಷ ಉಡುಗೊರೆಯೊಂದಿಗೆ ಗೌರವಿಸಲಾಗಿದೆ ಎಂದು ಶಿಂಧೆ ಎಕ್ಸ್ ಪೋಸ್ಟ್ ನಲ್ಲಿ ವಿವರಿಸಿದ್ದಾರೆ.
ಮಹಾರಾಷ್ಟ್ರದ ಸಾಂಪ್ರದಾಯಿಕ ಹಬ್ಬವನ್ನು ವಿಶೇಷವಾಗಿ ಅತಿಥಿಗಳಿಗಾಗಿ ಆಯೋಜಿಸಲಾಗಿತ್ತು. ಹಲವು ದೇಶದ ರಾಯಭಾರಿಗಳು ಅತ್ಯುತ್ಸಾಹದಿಂದ ಭಾಗಿಯಾಗಿ ಗಣೇಶ ಹಬ್ಬವನ್ನು ಸಂಭ್ರಮಿಸಿದರು. ಅವರಿಗೆ ಗಣೇಶನಿಗೆ ಪ್ರೀತಿಯಾದ ಮೋದಕವನ್ನು ಪ್ರಸಾದವಾಗಿ ನೀಡಲಾಗಿದೆ ಎಂದು ಕೂಡ ಮತ್ತೊಂದು ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದಾರೆ.
ಗಣೇಶ ಚತುರ್ಥಿಯಿಂದ ಆರಂಭವಾಗುವ ಹಬ್ಬವು ಅನಂತ ಚತುರ್ದಶಿವರೆಗೆ 10 ದಿನಗಳ ಕಾಲ ಆಚರಣೆ ಮಾಡಲಾಗುವುದು.
ಇದನ್ನೂ ಓದಿ:ವಯನಾಡ್ ದುರಂತದಲ್ಲಿ ಕುಟುಂಬದ 9 ಸದಸ್ಯರನ್ನು ಕಳೆದುಕೊಂಡ ಯುವತಿಯ ಭಾವಿ ಪತಿ ರಸ್ತೆ ಅಪಘಾತದಲ್ಲಿ ಸಾವು