ಕರ್ನಾಟಕ

karnataka

ETV Bharat / bharat

ಬಂಗಾಳದಲ್ಲಿ ವೈದ್ಯೆ ಮೇಲೆ ಅತ್ಯಾಚಾರ, ಕೊಲೆ ಕೇಸ್​: ದೇಶಾದ್ಯಂತ ನಾಳೆ ಸೇವೆ ಸ್ಥಗಿತಗೊಳಿಸಿ ವೈದ್ಯರಿಂದ ಪ್ರತಿಭಟನೆ - Doctors Strike In India - DOCTORS STRIKE IN INDIA

ವೈದ್ಯೆ ವಿದ್ಯಾರ್ಥಿನಿ ಹತ್ಯೆ ಪ್ರಕರಣದ ವಿರುದ್ಧ ಸಿಡಿದೆದ್ದಿರುವ ವೈದ್ಯಕೀಯ ಸಂಘ ನಾಳೆ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ದೇಶಾದ್ಯಂತ ನಾಳೆ ವೈದ್ಯರಿಂದ ಪ್ರತಿಭಟನೆ
ದೇಶಾದ್ಯಂತ ನಾಳೆ ವೈದ್ಯರಿಂದ ಪ್ರತಿಭಟನೆ (ETV Bharat)

By ETV Bharat Karnataka Team

Published : Aug 11, 2024, 6:06 PM IST

ನವದೆಹಲಿ:ಪಶ್ಚಿಮಬಂಗಾಳದ ರಾಜಧಾನಿ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯೆ ವಿದ್ಯಾರ್ಥಿ ಮೇಲಿನ ಅತ್ಯಾಚಾರ, ಹತ್ಯೆ ಕೇಸ್​ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ವಿರುದ್ಧ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ) ತೀವ್ರ ಪ್ರತಿಭಟನೆಗೆ ಕರೆ ನೀಡಿದೆ. ಸೋಮವಾರ ದೇಶಾದ್ಯಂತ ತುರ್ತು ಚಿಕಿತ್ಸೆ ಹೊರತುಪಡಿಸಿ ಕೆಲ ಸೇವೆಗಳನ್ನು ನಿಲ್ಲಿಸಲಾಗುವುದು ಎಂದಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರಿಗೆ ಪತ್ರ ಬರೆಯಲಾಗಿದ್ದು, ನಾಳೆ (ಸೋಮವಾರ) ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಲಿದ್ದಾರೆ. ತುರ್ತು ಸೇವೆ ಹೊರತುಪಡಿಸಿ ಹಲವು ಸೇವೆಗಳಲ್ಲಿ ವ್ಯತ್ಯಯವಾಗಲಿದೆ ಎಂದು ಫೋರ್ಡಾ ತಿಳಿಸಿದೆ. ಇದಕ್ಕೆ ಆರ್​ಜಿ ಕರ್​​ ವೈದ್ಯಕೀಯ ಕಾಲೇಜು ಕೂಡ ಬೆಂಬಲ ವ್ಯಕ್ತಪಡಿಸಿದೆ.

24 ಗಂಟೆಗಳ ಗಡುವು:ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ ಆರೋಪಿಗಳ ವಿರುದ್ಧ 24 ಗಂಟೆಯೊಳಗೆ ಕಠಿಣ ಕ್ರಮ ಜರುಗಿಸಬೇಕು ಎಂದು ಫೋರ್ಡಾ ಶನಿವಾರ ಗಡುವು ವಿಧಿಸಿತ್ತು. ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ವೈದ್ಯ ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು. ಆರೋಪಿಗಳ ಮೇಲೆ ಕ್ರಮ ಕೈಗೊಳ್ಳದಿದ್ದಲ್ಲಿ ಆಸ್ಪತ್ರೆಗಳಲ್ಲಿ ಸೇವೆ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಎಲ್ಲ ಪ್ರಕಾರದ ವೈದ್ಯರು ಇದಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದೆ.

ಏನಿದು ಪ್ರಕರಣ:ಕೋಲ್ಕತ್ತಾದಲ್ಲಿ ಸ್ನಾತಕೋತ್ತರ ವೈದ್ಯೆ ಮೇಲೆ ಇಲ್ಲಿನ ಆರ್​ಜಿ ಕರ್​ ಕಾಲೇಜಿನಲ್ಲಿ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ. ಪ್ರಾಥಮಿಕ ಶವಪರೀಕ್ಷೆಯಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ. ಸ್ನಾತಕೋತ್ತರ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಕಿರಿಯ ವೈದ್ಯೆ ಗುರುವಾರ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅರೆಬೆತ್ತಲೆಯಾಗಿ ಅವರ ಶವ ಪತ್ತೆಯಾಗಿತ್ತು.

ಶವಪರೀಕ್ಷೆಯಲ್ಲಿ ಆಕೆಯ ಕೈಕಾಲು, ಬಾಯಿ ಮತ್ತು ಕಣ್ಣುಗಳಿಂದ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ. ದೇಹದ ವಿವಿಧೆಡೆ ಗಾಯಗಳೂ ಕಂಡುಬಂದಿವೆ. ವರದಿಯ ಪ್ರಕಾರ ವೈದ್ಯೆಯನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಘಟನೆಯ ತನಿಖೆ ಆರಂಭಿಸಿದ ಪೊಲೀಸರು ಈಗಾಗಲೇ ಓರ್ವನನ್ನು ಬಂಧಿಸಿದ್ದಾರೆ. ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಬ್ಲೂಟೂತ್ ಆಧಾರದ ಮೇಲೆ, ಆತನನ್ನು ಬಂಧಿಸಿ ಕೊಲೆಗಾರ ಎಂದು ಗುರುತಿಸಲಾಗಿದೆ. ಆದರೆ ಸರ್ಕಾರಿ ಆಸ್ಪತ್ರೆಯಾದ ಕಾರಣ ಆರೋಪಿ ನೌಕರರನ್ನು ರಕ್ಷಿಸುತ್ತಿರುವ ಬಗ್ಗೆ ಸಂಶಯ ಮೂಡಿದೆ.

ಇದನ್ನೂ ಓದಿ:ಕೋಲ್ಕತ್ತಾದಲ್ಲಿ ವೈದ್ಯೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ: ಅಪರಾಧಿಗಳ ಬಂಧನಕ್ಕೆ ಫೋರ್ಡಾ 24 ಗಂಟೆ ಗಡುವು - DOCTOR RAPE AND MURDER

ABOUT THE AUTHOR

...view details