ಲಕ್ನೋ: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿಯ ಮಹಸಿ ತಹಶೀಲ್ನಲ್ಲಿ ತೋಳಗಳ ದಾಳಿ ಮುಂದುವರೆದಿದ್ದು, ಸೋಮವಾರ ರಾತ್ರಿ ಐದು ವರ್ಷದ ಬಾಲಕಿ ತೋಳದ ದಾಳಿಯಿಂದ ಗಾಯಗೊಂಡಿದ್ದಾಳೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಸ್ಥಳೀಯರ ಪ್ರಕಾರ, ಪಂದೊಯಿಯಾ ಗ್ರಾಮದಲ್ಲಿ ಮನೆಯಲ್ಲಿ ಬಾಲಕಿ ಅಫ್ಸಾನಾ ಮಲಗಿದ್ದಾಗ ಆಕೆ ಮೇಲೆ ತೋಳ ದಾಳಿ ಮಾಡಿದ್ದು, ಕುತ್ತಿಗೆಯಲ್ಲಿ ತೋಳದ ಹಲ್ಲಿನ ಗುರುತುಗಳನ್ನು ಕಾಣಬಹುದಾಗಿದೆ. ಬಾಲಕಿಯನ್ನು ತಕ್ಷಣಕ್ಕೆ ಮಹಸಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಕಳೆದೆರಡು ತಿಂಗಳಿನಿಂದ ತೋಳಗಳ ದಾಳಿ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ವಹಿಸುವಂತೆ ಸ್ಥಳೀಯರಿಗೆ ಸರ್ಕಾರದ ನಾನಾ ಇಲಾಖೆಗಳು ಮನವಿ ಮಾಡಿಕೊಂಡಿವೆ. ಇನ್ನು ಮಹಸಿಯ ಬಿಜೆಪಿ ಶಾಸಕ ಸುರೇಶ್ವರ್ ಸಿಂಗ್ ಸಹ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಈ ಬಗ್ಗೆ ಹುಷಾರಾಗಿರುವಂತೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿದ್ದಾರೆ.
ಕಳೆದೆರಡು ತಿಂಗಳಿನಿಂದ ತೋಳಗಳ ದಾಳಿಯಿಂದಾಗಿ ಏಳು ಮಕ್ಕಳು ಸೇರಿದಂತೆ 8 ಜನ ಸಾವನ್ನಪ್ಪಿದ್ದಾರೆ. 30 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೋಳದ ಸೆರೆಗೆ ಅರಣ್ಯ ಇಲಾಖೆ ವಿವಿಧ ಕ್ರಮಕ್ಕೆ ಮುಂದಾಗಿದ್ದರೂ, ತೋಳ ಸೆರೆಹಿಡಿಯುವಲ್ಲಿ ವಿಫಲವಾಗಿದೆ.
ಇಲ್ಲಿನ ಸಮೀಪದ ಸೀತಾಪುರ್ ಜಿಲ್ಲೆಯಲ್ಲಿ ಪ್ರಾಣಿ ದಾಳಿಯ ವರದಿಯಾಗಿದೆ. ರಾಮ್ಪುರ್, ಪಿಲಿಭಿಟ್ ಜಿಲ್ಲೆ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಚಿರತೆಗಳು ಕಾಣಿಸಿಕೊಂಡಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತೋಳಗಳ ದಾಳಿ ವರದಿಯಾಗಿದ್ದು, ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಿರುವ ಹಿನ್ನೆಲೆ ಗುಸ್ತು ತೀವ್ರಗೊಳಿಸುವಂತೆ ಮತ್ತು ಸೂಕ್ಷ್ಮ ಜಿಲ್ಲೆಗಳಲ್ಲಿ ಹೆಚ್ಚಿನ ಮಾನವಶಕ್ತಿ ನಿಯೋಜಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಸರ್ಕಾರ ಜನರ ಜೀವ ರಕ್ಷಣೆ ಮಾಡಲು ಬದ್ಧವಾಗಿದೆ ಎಂದಿರುವ ಅವರು, ವನ್ಯಜೀವಿ ಸೂಕ್ಷ್ಮ ವಲಯದಲ್ಲಿ ಅಗತ್ಯ ಸುರಕ್ಷಾ ಭದ್ರತಾ ಕ್ರಮ ಅಳವಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಸಾಧ್ಯವಾದಷ್ಟ ಬೇಗ ಪರಿಸ್ಥಿತಿ ನಿಯಂತ್ರಿಸುವಂತೆ ಅಧಿಕಾರಿಗಳಿಗೆ ಕಟ್ಟು ನಿಟ್ಟಿ ಸೂಚನೆ ಕೂಡಾ ನೀಡಿದ್ದಾರೆ. ಇದೇ ವೇಳೆ, ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ವನ್ಯ ಜೀವಿಗಳ ನಿಯಂತ್ರಣ ಮತ್ತು ಸೆರೆಗೆ ಮುಂದಾಗುವಂತೆ ಸೂಚನೆ ನೀಡಿದ್ದಾರೆ.