ಗುವಾಹಟಿ(ಅಸ್ಸಾಂ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ನಾಯಕರ ವಿರುದ್ಧ ಅಸ್ಸಾಂ ಪೊಲೀಸರು ಮಂಗಳವಾರ ಎಫ್‌ಐಆರ್ ದಾಖಲಿಸಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಪ್ರಸ್ತುತ ಅಸ್ಸಾಂನಲ್ಲಿದೆ. ಪಕ್ಷದ ಬೆಂಬಲಿಗರು ಮತ್ತು ಮುಖಂಡರು ರಾಜಧಾನಿ ಗುವಾಹಟಿ ಪ್ರವೇಶಿಸುವ ಪ್ರಯತ್ನದಲ್ಲಿ ಬ್ಯಾರಿಕೇಡ್‌ಗಳನ್ನು ಮುರಿದು ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿ ಹಿಂಸಾಚಾರ ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಗುವಾಹಟಿ ಪೊಲೀಸ್ ಆಯುಕ್ತ ದಿಗಂತ ಬೋರಾ ತಿಳಿಸಿದ್ದಾರೆ.
"ಹಿಂಸಾಚಾರ, ಪ್ರಚೋದನೆ, ಸಾರ್ವಜನಿಕ ಆಸ್ತಿ ಹಾನಿ ಮತ್ತು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆಯಂಥ ಕೃತ್ಯಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಕನ್ಹಯ್ಯಾ ಕುಮಾರ್ ಮತ್ತು ಇತರ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ" ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬ್ಯಾರಿಕೇಡ್‌ಗಳನ್ನು ಮುರಿಯಲು ಜನರನ್ನು ಪ್ರಚೋದಿಸಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಮಹಾನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿಗೆ ನಿರ್ದೇಶನ ನೀಡಿರುವುದರಿಂದ ಅವರಲ್ಲಿ ಭಯವಿದೆ ಎಂಬುದನ್ನು ಇದು ತೋರಿಸುತ್ತದೆ. ಅಸ್ಸಾಂನ ಜನರು ಅವರ ವಿರುದ್ಧ 'ತುಫಾನ್' ಮತ್ತು 'ಅಂಧಿ'ಯಾಗಿ (ಚಂಡಮಾರುತ) ನಿಂತಿರುವುದರಿಂದ ಭಯಗೊಂಡಿದ್ದಾರೆ ಎಂದು ರಾಹುಲ್ ಟೀಕಿಸಿದ್ದಾರೆ.
ಈಶಾನ್ಯ ರಾಜ್ಯದ ಅತಿ ದೊಡ್ಡ ನಗರ ಗುವಾಹಟಿಯ ಪ್ರಮುಖ ರಸ್ತೆ ಮಾರ್ಗಗಳಲ್ಲಿ ಯಾತ್ರೆಯಲ್ಲಿ ಭಾಗವಹಿಸಿರುವ ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರನ್ನು ತಡೆಯಲು ಹೆದ್ದಾರಿಯುದ್ದಕ್ಕೂ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಕಾಂಗ್ರೆಸ್ ಬೆಂಬಲಿಗರು ಬ್ಯಾರಿಕೇಡ್‌ಗಳನ್ನು ತೆಗೆದುಹಾಕುತ್ತಿದ್ದಂತೆ ಪೊಲೀಸ್ ಸಿಬ್ಬಂದಿಯೊಂದಿಗೆ ಮಾರಾಮಾರಿ ನಡೆದಿದೆ. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಬೋರಾ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇಬಬ್ರತ ಸೈಕಿಯಾ ಗಾಯಗೊಂಡಿದ್ದಾರೆ.
''ಈ ಹಿಂದೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಅದೇ ಮಾರ್ಗದಲ್ಲಿ ಹೋಗಲು ಅವಕಾಶ ನೀಡಿದ್ದರು. ಆದರೆ ಈಗ ಕಾಂಗ್ರೆಸ್‌ಗೆ ಅನುಮತಿ ನೀಡುತ್ತಿಲ್ಲ. ನಾವು ದುರ್ಬಲರು ಎಂದು ನೀವು ಭಾವಿಸಬಾರದು. ನಾವು ಬ್ಯಾರಿಕೇಡ್‌ಗಳನ್ನು ಮುರಿದಿದ್ದೇವೆ" ಎಂದು ತಮ್ಮ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು "ಬಬ್ಬರ್ ಶೇರ್" (ಸಿಂಹ) ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.
ಇದನ್ನೂ ಓದಿ:ಭಾರತ್ ಜೋಡೋ ನ್ಯಾಯ ಯಾತ್ರೆ: ಅಸ್ಸೋಂ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಮೇಲೆ ಹಲ್ಲೆ