ಕಣ್ಣೂರು(ಕೇರಳ): ಅಧಿಕಾರಿಗಳು ನಿಯಮಿತವಾಗಿ ಚಿನ್ನ ಕಳ್ಳಸಾಗಣೆಯನ್ನು ತಡೆಯುತ್ತಿದ್ದರೂ ಕೆಲವರು ಇಂಥ ಚಟುವಟಿಕೆಗಳಲ್ಲಿ ತೊಡಗುವ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ಇತ್ತೀಚೆಗೆ ಕೇರಳದ ವಿಮಾನಯಾನ ಸಂಸ್ಥೆಯೊಂದರ ಮಹಿಳಾ ಉದ್ಯೋಗಿಯೊಬ್ಬರು ಕಳ್ಳಸಾಗಣೆ ಮಾಡಲೆತ್ನಿಸಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿ ತನ್ನ ಖಾಸಗಿ ಅಂಗಗಳಲ್ಲಿ 1 ಕೆಜಿ ಚಿನ್ನ ಬಚ್ಚಿಟ್ಟಿರುವುದಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಮೂರು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೇ 28ರಂದು ಮಸ್ಕತ್‌ನಿಂದ ಕಣ್ಣೂರಿಗೆ ವಿಮಾನ ಆಗಮಿಸಿತ್ತು. ಇದರಲ್ಲಿ ಚಿನ್ನ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ಡಿಆರ್‌ಐ ಅಧಿಕಾರಿಗಳಿಗೆ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಲಭಿಸಿತ್ತು. ಆ ವಿಮಾನದಲ್ಲಿ ಗಗನಸಖಿಯಾಗಿದ್ದ ಸುರ್ಭಿ ಖಾತೂನ್ ಎಂಬಾಕೆ ಈ ಅಕ್ರಮ ಸಾಗಾಟದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಈ ಸಂದರ್ಭದಲ್ಲಿ ಗುದದ್ವಾರದಲ್ಲಿ 960 ಗ್ರಾಂ ಚಿನ್ನಾಭರಣ ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಗಿದೆ.