ಕರ್ನಾಟಕ

karnataka

ETV Bharat / bharat

ಮನೆ ಮನೆಗೆ ತೆರಳಿ ಉಚಿತ ಔಷಧಗಳನ್ನು ವಿತರಿಸುವ 'ಮೆಡಿಸಿನ್ ಬಾಬಾ': ಇವರ ಬಗ್ಗೆ ನಿಮಗೆಷ್ಟು ಗೊತ್ತು? - MEDICINE BABA

ರಾಷ್ಟ್ರರಾಜಧಾನಿಯಲ್ಲಿ ವ್ಯಕ್ತಿಯೊಬ್ಬ ಮನೆ ಮನೆಗೆ ತೆರಳಿ ಉಚಿತ ಔಷಧಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದು, ಅವರನ್ನು ಅಲ್ಲಿನ ಜನ ಪ್ರೀತಿಯಿಂದ 'ಮೆಡಿಸಿನ್ ಬಾಬಾ' ಅಂತಲೇ ಕರೆಯುತ್ತಿದ್ದಾರೆ.

MEDICINE BABA
ಉಚಿತ ಔಷಧಿಗಳನ್ನು ವಿತರಿಸುವ ಮೆಡಿಸಿನ್ ಬಾಬಾ (ETV Bharat)

By ETV Bharat Karnataka Team

Published : Dec 26, 2024, 2:23 PM IST

Updated : Dec 26, 2024, 2:57 PM IST

ನವದೆಹಲಿ : 88 ವರ್ಷದ ವೃದ್ಧರೊಬ್ಬರು ರಾಷ್ಟ್ರರಾಜಧಾನಿಯಲ್ಲಿ ಅನಾರೋಗ್ಯ ಪೀಡಿತರಿಗೆ ಉಚಿತ ಔಷಧೋಪಚಾರ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಕಳೆದ 15 ವರ್ಷಗಳಿಂದ ಮನೆ ಮನೆಗೆ ತೆರಳಿ ಉಚಿತ ಔಷಧಗಳನ್ನು ನೀಡುತ್ತಾ ಬರುತ್ತಿರುವ ಅವರನ್ನು ರಾಷ್ಟ್ರರಾಜಧಾನಿಯ ಜನರು 'ಮೆಡಿಸಿನ್ ಬಾಬಾ' ಅಂತಲೇ ಕರೆಯುವುದುಂಟು. ಪಶ್ಚಿಮ ದಿಲ್ಲಿಯ ಉತ್ತಮ್‌ನಗರದ ಕಿರಿದಾದ ರಸ್ತೆಯಲ್ಲಿರುವ ಇವರ ಮೂಲ ಹೆಸರು ಓಂಕಾರನಾಥ. ಬಳಕೆಯಾಗದ ಔಷಧಗಳನ್ನು ಸಂಗ್ರಹಿಸುವುದು, ಆ ಔಷಧಗಳನ್ನು ಆಯಾ ರೋಗಪೀಡಿತರಿಗೆ ಉಚಿತವಾಗಿ ವಿತರಿಸುವುದು, ನಿರ್ಗತಿಕರನ್ನು, ಬಡವರನ್ನು ಮತ್ತು ವಯಸ್ಸಾದವರನ್ನು ಗುರುತಿಸಿ ಅವರ ಯೋಗಕ್ಷೇಮ ವಿಚಾರಿಸುವುದು ಮೆಡಿಸಿನ್ ಬಾಬಾ ಅವರ ನಿತ್ಯ ಕಾಯಕ. ಅವರ ಸಮಾಜ ಸೇವೆ ಕುರಿತು ಛತ್ತೀಸ್‌ಗಢದ 10ನೇ ತರಗತಿಯ ಪುಸ್ತಕದಲ್ಲಿ ಪಾಠವಾಗಿ ಇಡಲಾಗಿದೆ.

ಮೂರು ಕೊಠಡಿಗಳಿರುವ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಮೆಡಿಸಿನ್ ಬಾಬಾ, ಪ್ರತಿ ವರ್ಷ 1.5 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಔಷಧಗಳನ್ನು ವಿತರಣೆ ಮಾಡುವ ಮೂಲಕ ನಿರ್ಗತಿಕರ ಪಾಲಿನ ದೇವರಾಗಿದ್ದಾರೆ. ಮೂರರ ಪೈಕಿ ಎರಡು ಕೊಠಡಿಗಳಲ್ಲಿ 1ರಿಂದ 2 ಲಕ್ಷ ರೂ. ವರೆಗಿನ ಔಷಧಗಳು, ಆಕ್ಸಿಜನ್ ಸಿಲಿಂಡರ್, ದುಬಾರಿ ಇಂಜೆಕ್ಷನ್, ವೀಲ್ ಚೇರ್, ಊರುಗೋಲು ಸೇರಿದಂತೆ ಅನಾರೋಗ್ಯದ ಸಂದರ್ಭದಲ್ಲಿ ಬಳಸುವ ಅಗತ್ಯ ವಸ್ತುಗಳನ್ನು ಇಡಲಾಗಿದ್ದು, ಇನ್ನೊಂದು ಕೊಠಡಿಯಲ್ಲಿ ಅವರ ಕಚೇರಿ ಇದೆ. ಅಚ್ಚರಿಯ ವಿಷಯ ಎಂದರೆ ಬಾಬಾ ಅಂಗವಿಕಲರಾಗಿದ್ದು, ಪ್ರತಿ ದಿನ ಬೀದಿ ಬೀದಿ ಅಲೆದು ಜನರಿಂದ ಔಷಧ ಸಂಗ್ರಹಿಸುತ್ತಾರೆ. ಜನರಿಂದ ಪಡೆದ ದೇಣಿಗೆಯಿಂದ ಅದೇ ಔಷಧಗಳನ್ನು ಆಯಾ ರೋಗಪೀಡಿತರಿಗೆ ಉಚಿತವಾಗಿ ವಿತರಿಸುತ್ತಾರೆ. ವೃತ್ತಿಯಲ್ಲಿ ಬ್ಲಡ್ ಬ್ಯಾಂಕ್ ತಂತ್ರಜ್ಞರಾಗಿದ್ದರಿಂದ ಔಷಧಗಳ ಬಗ್ಗೆ ಬಲ್ಲವರಾಗಿದ್ದಾರೆ.

ಬದುಕನ್ನೇ ಬದಲಿಸಿದ ಅಪಘಾತ: ಉಚಿತ ಔಷಧಗಳನ್ನು ವಿತರಿಸುವ ಮಾರ್ಗವನ್ನು ಆಯ್ಕೆ ಮಾಡಿಕೊಂಡ ಬಗ್ಗೆ ಅವರನ್ನು ಕೇಳಿದಾಗ ಬಾಬಾ ಪ್ರತಿಕ್ರಿಯಿಸಿದ್ದು ಹೀಗೆ.

15 ವರ್ಷಗಳ ಹಿಂದೆ ಲಕ್ಷ್ಮಿ ನಗರದಲ್ಲಿ ನಿರ್ಮಾಣ ಹಂತದ ಮೆಟ್ರೋದ ಪಿಲ್ಲರ್ ಬಿದ್ದು ದೊಡ್ಡ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಹಲವರು ಮೃತಪಪಟ್ಟರೆ, ಹಲವರು ಗಾಯಗೊಂಡಿದ್ದರು. ಘಟನೆ ನಡೆದ ಸ್ಥಳದ ಸಮೀಪವೇ ನಾನು ಹಾದು ಹೋಗುತ್ತಿದ್ದೆ. ಗಾಯಾಳುಗಳ ಅಂದಿನ ರೋದನೆ ನೆನೆದರೆ ಇನ್ನು ಕಣ್ಣ ಮುಂದೆ ಬರುತ್ತದೆ. ಬಡವರು ಮತ್ತು ಕಾರ್ಮಿಕರೇ ಹೆಚ್ಚು ಜನ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿದ್ದ ವೈದ್ಯರು ಆಸ್ಪತ್ರೆಯಲ್ಲಿ ಕೆಲವು ಅಗತ್ಯ ಔಷಧಗಳು ಖಾಲಿಯಾಗಿದ್ದು, ಬೇರೆಡೆಯಿಂದ ತರುವಂತೆ ಹೇಳುತ್ತಿದ್ದ ದೃಶ್ಯ ಕಂಡೆ. ಆದರೆ, ಔಷಧ ಖರೀದಿಸುವಷ್ಟು ಹಣ ಅವರ ಬಳಿ ಇರಲಿಲ್ಲ ಎಂಬುದನ್ನು ನಾನು ಗಮನಿಸಿದ್ದೆ. ಆಗ ಎಲ್ಲರೂ ಅಸಹಾಕರಾಗಿದ್ದರು . ಅದೇ ಘಟನೆ ನನ್ನ ಮನದಲ್ಲಿ ಉಳಿಯಿತು. ಅದಕ್ಕೊಂದು ಮಾರ್ಗ ಹುಡುಕುವಲ್ಲಿ ನಿರತನಾದೆ. ತಕ್ಷಣಕ್ಕೆ ಬೇಕಾದ ಔಷಧಗಳು ಪ್ರತಿ ಮನೆಯಲ್ಲೂ ಹೆಚ್ಚುವರಿಯಾಗಿ ಇದ್ದೇ ಇರುತ್ತವೆ, ಅವುಗಳನ್ನು ಕೇಳಿ ಸಂಗ್ರಹಿಸಿದರೆ ಹೇಗೆ ಎಂಬ ಅವರಿವು ಮೂಡಿತು. ಅಂದು ಮಾಡಿದ ಸಂಕಲ್ಪ ಈಗಲೂ ನಡೆಸಿಕೊಂಡು ಬರಲಾಗುತ್ತದೆ. ವೃತ್ತಿಯಲ್ಲಿ ಬ್ಲಡ್ ಬ್ಯಾಂಕ್ ತಂತ್ರಜ್ಞರಾಗಿದ್ದರಿಂದ ನನಗೆ ಯಾವ ಔಷಧ, ಯಾರಿಗೆ ಅಗತ್ಯ ಇದೆ ಎಂಬುದು ಗೊತ್ತಾಗುತ್ತದೆ. ಸದ್ಯ ನನ್ನ ಬಳಿ 2 ಲಕ್ಷ ರೂ.ವರೆಗಿನ ಔಷಧಗಳಿವೆ ಎನ್ನುತ್ತಾರೆ ಬಾಬಾ.

ಪ್ರತಿದಿನ 100 ಕಿ. ಮೀ ಓಡಾಟ: ಆರಂಭದಲ್ಲಿ ರಾಷ್ಟ್ರರಾಜದಾನಿಯಲ್ಲಿ ಮಾತ್ರ ಔಷಧಗಳನ್ನು ಸಂಗ್ರಹಿಸುತ್ತಿದ್ದೆ. ಈಗ ದೇಶದ ಎಲ್ಲ ರಾಜ್ಯಗಳಿಗೂ ಹೋಗಿ ಜನರಿಂದ ಔಷಧ ಸಂಗ್ರಹಿಸಲಾಗುತ್ತಿದೆ. ದೇಶದ ಹೊರಗೂ ತಮ್ಮ ಸೇವಾ ವ್ಯಾಪ್ತಿ ಹರಿಸಿದ್ದು, ಫ್ರಾನ್ಸ್, ವಿಯೆಟ್ನಾಂ, ಇಂಗ್ಲೆಂಡ್ ಮತ್ತು ಕೆನಡಾದಿಂದ ಔಷಧ ಸಂಗ್ರಹ ಮಾಡಲಾಗುತ್ತದೆ. ಆರಂಭದದಲ್ಲಿ ಬೇರೆ ಬೇರೆ ಸ್ಥಳಗಳಿಗೆ ಬಸ್‌ಗಳಲ್ಲಿ ಹೋಗುತ್ತಿದೆ. 15 ಕಿ ಮೀ ಮಾತ್ರ ಹೋಗಿ ಬರುತ್ತಿದ್ದೆ. ಈಗ ಒಂದು ದಿನದಲ್ಲಿ 50 ರಿಂದ 100 ಕಿ ಮೀ ಪ್ರದೇಶವನ್ನು ಕವರ್ ಮಾಡುತ್ತಿರುವೆ. ಮನುಷ್ಯ ಮನಸ್ಸಿನಲ್ಲಿ ಯುವಕನಾಗಿರಬೇಕು ಮತ್ತು ದೇಹದಲ್ಲಿ ಅಲ್ಲ ಎನ್ನುವ ಬಾಬಾ, ಇತ್ತೀಚೆಗೆ 7 ಲಕ್ಷ ರೂಪಾಯಿ ಮೌಲ್ಯದ ಮೂರು ಔಷಧಗಳನ್ನು ಸಂಗ್ರಹಿಸಿ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಬಡ ನಿರ್ಗತಿಕರಿಗೆ ನೀಡಿದೆ. ಒಂದು ಮಾತ್ರೆಯ ಬೆಲೆ 2,04,435 ರೂ. ಎಂದು ಕೆಲವು ಘಟನಾವಳಿಗಳನ್ನು ಹೇಳಿಕೊಂಡರು.

ಅಸಹಾಯಕ ಬಡವರಿಗೆ ಉಚಿತ ಔಷಧ ಮತ್ತು ಉಪಯುಕ್ತ ವಸ್ತುಗಳನ್ನು ದಾನ ಮಾಡುವುದರ ಜೊತೆಗೆ 21 ಜನರಿಗೆ ಮೂತ್ರಪಿಂಡಗಳನ್ನು ಬದಲಾಯಿಸಲು ಸಹಾಯ ಮಾಡಿರುವುದು ಗಮನಾರ್ಹ. ಬ್ಲಡ್ ಬ್ಯಾಂಕ್ ತಂತ್ರಜ್ಞರಾಗಿದ್ದ ಮೆಡಿಸಿನ್ ಬಾಬಾ, ಔಷಧಗಳನ್ನು ವಿತರಿಸಲು ಸಂಬಂಧಪಟ್ಟ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ.

ಪ್ರತಿ ರಾಜ್ಯದಲ್ಲಿ ಔಷಧ ಬ್ಯಾಂಕ್ ರಚಿಸಬೇಕು. ಯುವಕರು ಕೂಡ ಈ ಕಾರ್ಯಕ್ಕೆ ಮುಂದಾಗಬೇಕು. ಕೋವಿಡ್ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು. ಆ ವೇಳೆ ಸ್ಮಶಾನ, ದೇವಾಲಯ, ಗುರುದ್ವಾರ ಮತ್ತು ಮಸೀದಿಗಳಲ್ಲಿ ಔಷಧ ದಾನ ಪೆಟ್ಟಿಗೆಗಳನ್ನು ಸ್ಥಾಪಿಸಿದ್ದೆ. ಈಗಲೂ ಕೆಲವೆಡೆ ಇಡಲಾಗಿದ್ದು, ತಿಂಗಳಿಗೊಮ್ಮೆ ಆ ಪೆಟ್ಟಿಗೆಗಳಿಂದ ಔಷಧಿಗಳನ್ನು ಹೊರತೆಗೆಯಲಾಗುತ್ತದೆ. ಜನರಿಂದ ಪಡೆದ ದೇಣಿಗೆಯಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುತ್ತಿರುವೆ. ಮನೆ ಬಾಡಿಗೆಗೆ ಇದ್ದು, ಅದರ ಬಾಡಿಗೆಯನ್ನು ಜನರಿಂದ ದೇಣಿಗೆ ಮೂಲಕ ವ್ಯವಸ್ಥೆ ಮಾಡಲಾಗುತ್ತಿದೆ. ಸರ್ಕಾರ ತಮ್ಮಂತವರ ಕಷ್ಟಗಳಿಗೆ ಸ್ಪಂದಿಸಿದರೆ ಇನ್ನೂ ಹೆಚ್ಚು ಹೆಚ್ಚು ಸಹಾಯ ಮಾಡಬಹುದು ಎನ್ನುತ್ತಾರೆ ಮೆಡಿಸಿನ್ ಬಾಬಾ.

ಇದನ್ನೂ ಓದಿ:ತೀವ್ರ ಚಳಿಗೆ ನಡುಗುತ್ತಿದೆ ಉತ್ತರ ಭಾರತ: ಬಡವರಿಗೆ, ನಿರ್ಗತಿಕರ ನೆರವಿಗೆ ಇವೆ ಆಶ್ರಯಧಾಮಗಳು! - WINTER SURGES IN DELHI

Last Updated : Dec 26, 2024, 2:57 PM IST

ABOUT THE AUTHOR

...view details