ಮುಂಬೈ:ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಛತ್ರಪತಿ ಶಿವಾಜಿ ಮಹಾರಾಜರು ಸೂರತ್ ಮೇಲೆ ನಡೆಸಿದ್ದ ದಾಳಿಯ ಇತಿಹಾಸ ಗೊತ್ತಿಲ್ಲ ಎಂದು ವ್ಯಂಗ್ಯವಾಡಿರುವ ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್, ಬೇಕಾದರೆ ಅವರಿಗೆ ಇತಿಹಾಸ ಕಲಿಸಲು ಟೀಚರ್ ಒಬ್ಬರನ್ನು ಕಳುಹಿಸುವುದಾಗಿ ಹೇಳಿದ್ದಾರೆ.
ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ತಮ್ಮ 'ಡಿಸ್ಕವರಿ ಆಫ್ ಇಂಡಿಯಾ' (1946) ಕೃತಿಯಲ್ಲಿ ಛತ್ರಪತಿ ಶಿವಾಜಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಕ್ಕಾಗಿ ಅವರು ಭಾನುವಾರ ದೇವೇಂದ್ರ ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಹ್ಮದ್ ನಗರ ಕೋಟೆಯ (1942-1945) ಜೈಲಿನಲ್ಲಿದ್ದಾಗ ಬರೆದ ತಮ್ಮ ಪ್ರಬಂಧದಲ್ಲಿ ಛತ್ರಪತಿ ಶಿವಾಜಿ ಮಹಾರಾಜ್ ಅವರ ಉಲ್ಲೇಖಕ್ಕಾಗಿ ನೆಹರು ಆವಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ರಾವತ್ ತಿಳಿಸಿದರು.
"ಕೃತಿಯನ್ನು ಬರೆದ ಸಂದರ್ಭದಲ್ಲಿ ನೆಹರೂರವರು ಜೈಲಿನಲ್ಲಿ ಬಂದಿಯಾಗಿದ್ದರು. ತಮ್ಮ ಬಳಿ ಸಾಕಷ್ಟು ಮಾಹಿತಿಗಳು ಲಭ್ಯವಿಲ್ಲದ ಕಾರಣದಿಂದ ಛತ್ರಪತಿಯ ಬಗ್ಗೆ ಹಾಗೆ ಬರೆದಿದ್ದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದರು. ಅಲ್ಲದೇ ಆ ಬಗ್ಗೆ ಕ್ಷಮೆಯಾಚಿಸಿದ ಅವರು ಕೃತಿಯ ಮುಂದಿನ ಆವೃತ್ತಿಯಲ್ಲಿ ಅದನ್ನು ಸರಿಪಡಿಸಿದ್ದರು. ಆದರೆ, ಇದು 70 ವರ್ಷಗಳ ಹಿಂದಿನ ವಿಷಯ. ಅಪ್ರಸ್ತುತ ವಿಷಯಗಳ ಬಗ್ಗೆ ಮಾತನಾಡಲು ಬಿಜೆಪಿ ಇತಿಹಾಸವನ್ನು ಕೆದಕುತ್ತಿದೆ. ಪದೇ ಪದೆ ಇತಿಹಾಸದ ಪುಸ್ತಕಗಳನ್ನು ಕೆದಕುವ ಬದಲು ಸ್ವತಃ ಬಿಜೆಪಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಅದೆಷ್ಟು ಬಾರಿ ಅವಮಾನ ಮಾಡಿದೆ ಎಂಬುದರ ಬಗ್ಗೆ ಮಾತನಾಡಲಿ" ಎಂದು ರಾವತ್ ಸವಾಲು ಹಾಕಿದರು.