ಹೈದರಾಬಾದ್:ಎಕ್ಸಿಟ್ ಪೋಲ್.. ಇದು ಎಕ್ಸಾಕ್ಟ್ ಪೋಲ್ ಅಲ್ಲ. ಅಂತಿಮವಾಗಿ ಫಲಿತಾಂಶದ ದಿನವೇ ವಾಸ್ತವ ಅಂಕಿ- ಅಂಶಗಳು ಹೊರ ಬೀಳುತ್ತವೆ. ಆಗಲೇ ಅದಕ್ಕೆ ನಿಖರವಾದ ಉತ್ತರ ಸಿಗುತ್ತದೆ. ಚುನಾವಣಾ ಪೂರ್ವ ಮತ್ತು ಚುನಾವಣೋತ್ತರ ಸಮೀಕ್ಷೆಗಳು ಅಭಿಪ್ರಾಯ ಸಂಗ್ರಹಗಳಾಗಿವೆಯಷ್ಟೇ. ಮತದಾರರ ನಡವಳಿಕೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಚುನಾವಣಾ ಫಲಿತಾಂಶಗಳನ್ನು ಊಹಿಸುವ ನಿರ್ಣಾಯಕ ಭಾಗಗಳಾಗಿವೆ. ಅಭಿಪ್ರಾಯ ಸಂಗ್ರಹಗಳು ಮತ್ತು ಸಮೀಕ್ಷೆಗಳು ಮತದಾರರ ಆಯ್ಕೆಯ ಸೂಚಕಗಳಾಗಿದ್ದರೂ, ಅವು ಒಂದೇ ಆಗಿರುವುದಿಲ್ಲ ಎಂಬುದನ್ನು ನಾವು ನೀವೆಲ್ಲ ಅರ್ಥ ಮಾಡಿಕೊಳ್ಳಬೇಕು.
ವಿವಿಧ ಸುದ್ದಿ ಸಂಸ್ಥೆಗಳು ಮತ್ತು ಕಂಪನಿಗಳು ಮತದಾನೋತ್ತರ ಸಮೀಕ್ಷೆಗಳ ಮೂಲಕ ಮುನ್ನೋಟ ಇಡುವುದರಿಂದ ಎಕ್ಸಿಟ್ ಪೋಲ್‌ಗಳ ಬಗ್ಗೆ ಜನರು ತೀವ್ರ ಕುತೂಹಲ ಹೊಂದಿರುತ್ತಾರೆ. ಆದಾಗ್ಯೂ, ಗಮನಿಸಬೇಕಾದ ಅಂಶ ಎಂದರೆ ವಾಸ್ತವ ಹಾಗೂ ಅಂತಿಮ ಫಲಿತಾಂಶದೊಂದಿಗೆ ಮಾತ್ರವೇ ಯಾರು ಎಷ್ಟು ಸ್ಥಾನ ಗಳಿಸಿದರು ಎಂಬುದನ್ನು ಹೇಳಬಹುದಾಗಿದೆ.
ಅಭಿಪ್ರಾಯ ಸಂಗ್ರಹಣೆ ಮತ್ತು ಚುನಾವಣೋತ್ತರ ಸಮೀಕ್ಷೆಯ ನಡುವಿನ ಪ್ರಾಥಮಿಕ ವ್ಯತ್ಯಾಸವೆಂದರೆ, ಮತದಾರನು ತನ್ನ ಮತವನ್ನು ಚಲಾಯಿಸುವ ಮೊದಲು ಸಂಗ್ರಹಿಸುವ ಅಭಿಪ್ರಾಯಗಳನ್ನು ಚುನಾವಣಾ ಪೂರ್ವ ಸಮೀಕ್ಷೆ ಅಥವಾ ಜನಮತಗಣನೆ ಎನ್ನಲಾಗುತ್ತದೆ. ಇಲ್ಲಿ ಈ ಬಾರಿ ಯಾರಿಗೆ ಮತ ಹಾಕುತ್ತೀರಿ ಎಂಬುದು ಕಾಮನ್ ಪ್ರಶ್ನೆಯಾಗಿರುತ್ತೆ. ಇನ್ನೊಂದು ಮತದಾರ ತನ್ನ ಮತ ಚಲಾಯಿಸಿದ ಬಳಿಕ ನೀಡುವ ಉತ್ತರ ಅಥವಾ ಆತನಿಂದ ಪಡೆಯುವ ಉತ್ತರವನ್ನೇ ಸಂಗ್ರಹಿಸುವ ದಾಖಲಿಸುವುದಕ್ಕೆ ಮತದಾನೋತ್ತರ ಸಮೀಕ್ಷೆ ಎನ್ನಲಾಗುತ್ತದೆ.
OPINION POLLS: ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಅಭಿಪ್ರಾಯ ಸಂಗ್ರಹ ಎಂದೂ ಕರೆಯಲಾಗುತ್ತದೆ. ಚುನಾವಣೆಯ ಹಿಂದಿನ ದಿನ, ವಾರಗಳು ಅಥವಾ ತಿಂಗಳುಗಳ ಮುಂಚೆ ಇದನ್ನು ಕೈಗೊಳ್ಳಲಾಗುತ್ತದೆ. ಈ ಸಮೀಕ್ಷೆಗಳು ಜನ ಸಾಮಾನ್ಯರು ಅಥವಾ ಕೆಲವು ಮತದಾರರಿಂದ ಅಭಿಪ್ರಾಯ ಸಂಗ್ರಹಿಸಿ, ಯಾರು ಅಥವಾ ಯಾವ ಪಕ್ಷ, ಯಾವ ವ್ಯಕ್ತಿ ಪರ ಜನರ ಒಲವು ಇದೆ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
ಸಮಯ:ಚುನಾವಣೆಯ ಮುಂಚೆಯೇ, ಮತದಾರರು ತಮ್ಮ ಆಲೋಚನೆಗಳು ಮತ್ತು ಉದ್ದೇಶಗಳನ್ನು ಹೇಳಲು ಚುನಾವಣಾ ಪೂರ್ವದ ಸಮೀಕ್ಷೆಗಳಲ್ಲಿ ಅವಕಾಶ ನೀಡಲಾಗುತ್ತದೆ. ಇದು ರಾಜಕೀಯ ಪ್ರಚಾರದ ಬದಲಾವಣೆಯ ಡೈನಾಮಿಕ್ಸ್‌ನ ಒಳನೋಟಗಳನ್ನು ಒಳಗೊಂಡಿರುತ್ತದೆ.
ಮಾದರಿಗಳ ಆಯ್ಕೆ:ಮತದಾರರ ಆದ್ಯತೆಗಳ ಅರ್ಥವನ್ನು ಪಡೆಯಲು ಅಭಿಪ್ರಾಯ ಸಂಗ್ರಹಣೆಯಲ್ಲಿ ನೋಂದಾಯಿತ ಮತದಾರರ ಯಾದೃಚ್ಛಿಕ ಮಾದರಿಯನ್ನು ಆಗಾಗ್ಗೆ ಬಳಸಲಾಗುತ್ತದೆ.
ಪ್ರಶ್ನಿಸುವುದು: ಮತದಾನದ ಯೋಜನೆಗಳು, ಆದ್ಯತೆಯ ರಾಜಕೀಯ ಪಕ್ಷಗಳು ಮತ್ತು ಸಾಂದರ್ಭಿಕವಾಗಿ, ನೀತಿ ವಿಷಯಗಳ ವ್ಯಾಪ್ತಿಯ ಬಗ್ಗೆ ಜನರನ್ನು ಪ್ರಶ್ನಿಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತದೆ. ಈ ಸಮೀಕ್ಷೆಗಳು ಸಾರ್ವಜನಿಕ ಅಭಿಪ್ರಾಯ ಮತ್ತು ಚುನಾವಣಾ ಫಲಿತಾಂಶಗಳ ಮೇಲೆ ಅದರ ಸಂಭಾವ್ಯ ಪ್ರಭಾವ ಬೀರುತ್ತವೆ. ಮತ್ತು ಚುನಾವಣೆ ನಡೆಯುವ ದಿಕ್ಕಿನ ಬಗ್ಗೆ ನಿರ್ಣಯಿಸುತ್ತದೆ.
ದೋಷ : ಅಭಿಪ್ರಾಯ ಸಂಗ್ರಹಗಳು 100ಕ್ಕೆ 100 ಕರೆಕ್ಟ್ ಇರುತ್ತವೆ ಎಂದು ಹೇಳಲು ಆಗುವುದಿಲ್ಲ. ಇದು ಸಂಗ್ರಹ ಮಾಡಿರುವ ದತ್ತಾಂಶಗಳನ್ನು ಆಧರಿಸಿ ಇರುತ್ತದೆ. ಹೀಗಾಗಿ ಸಂಗ್ರಹಿಸಿದ ಡೇಟಾಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಆದರೂ ಇವು ಸಂಪೂರ್ಣ ದೋಷ ಮುಕ್ತ ಎಂದು ಹೇಳಲು ಆಗುವುದಿಲ್ಲ
ಮೌಲ್ಯಮಾಪನ: ಅಭಿಪ್ರಾಯ ಸಂಗ್ರಹಣೆ ಬಳಿಕ ಅದನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ. ಇನ್ನು ಈ ಎಲ್ಲ ಅಭಿಪ್ರಾಯ ಸಂಗ್ರಹಗಳು ಚುನಾವಣಾ ಫಲಿತಾಂಶಗಳ ನಿಖರವಾದ ಸೂಚಕವಲ್ಲ. ಮತದಾರರ ಭಾಗವಹಿಸುವಿಕೆ ಮತ್ತು ಸಾರ್ವಜನಿಕ ಅಭಿಪ್ರಾಯದಲ್ಲಿನ ಕೊನೆಯ ಕ್ಷಣದ ಬದಲಾವಣೆಗಳು ಸೇರಿದಂತೆ ಅಸ್ಥಿರಗಳಿಂದ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು. ಒಮ್ಮೊಮ್ಮೆ ಸಂಗ್ರಹಿಸಿದ ಮಾಹಿತಿಗಳು ಎಡವಟ್ಟು ಹೊಡೆಸಬಹುದು.