ನವದೆಹಲಿ:ಮೀಸಲಾತಿ ಪಡೆದು ಇತರರೊಂದಿಗೆ ಸ್ಪರ್ಧಿಸುವ ಸ್ಥಾನದಲ್ಲಿರುವವರನ್ನು (ಕೆನೆಪದರ) ಮೀಸಲಾತಿಯಿಂದ ಹೊರಗಿಡಬೇಕೇ ಎಂಬ ಕುರಿತು ಕಾರ್ಯಾಂಗ ಮತ್ತು ಶಾಸಕಾಂಗ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.
ನ್ಯಾ.ಬಿ.ಎ.ಆರ್.ಗವಾಯಿ ಮತ್ತು ನ್ಯಾ.ಆಗಸ್ಟಿನ್ ಜಾರ್ಜ್ ಮಶಿಹ್ ಅವರ ನೇತೃತ್ವದ ನ್ಯಾಯಪೀಠ ಈ ಕುರಿತ ಅರ್ಜಿಯ ವಿಚಾರಣೆ ನಡೆಸಿತು. ಕಳೆದ ಆಗಸ್ಟ್ನಲ್ಲಿ ಏಳು ಸದಸ್ಯರ ಸುಪ್ರೀಂ ನ್ಯಾಯಪೀಠ ನೀಡಿದ ತೀರ್ಪಿಗೆ ಸಂಬಂಧಿಸಿದಂತೆ ಈ ಅರ್ಜಿ ಸಲ್ಲಿಕೆಯಾಗಿತ್ತು.
ಮೀಸಲಾತಿಯ ಪ್ರಯೋಜನ ಪಡೆದ ವ್ಯಕ್ತಿ ಇತರರೊಂದಿಗೆ ಸ್ಪರ್ಧಿಸುವ ಸಾಮರ್ಥ್ಯವಿರುವಾಗ ಆತನನ್ನು ಮೀಸಲಾತಿಯಿಂದ ಹೊರಗಿಡಬೇಕೇ? ಎಂಬ ಕುರಿತು ಕಳೆದ 75 ವರ್ಷಗಳ ವಿದ್ಯಮಾನಗಳನ್ನು ನಾವು ಪರಿಗಣನೆಗೆ ತೆಗೆದುಕೊಂಡಿದ್ದೇವೆ. ಆದರೆ, ಇದ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿರುವುದು ಕಾರ್ಯಾಂಗ ಮತ್ತು ಶಾಸಕಾಂಗ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.
ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿಗಳನ್ನು ಮೇಲೆತ್ತುವ ಸಲುವಾಗಿ ಮೀಸಲಾತಿ ನೀಡಲು ಪರಿಶಿಷ್ಟ ಜಾತಿಗಳಲ್ಲಿ ಉಪ ಮೀಸಲಾತಿ ಹೊಂದುವುದಕ್ಕೆ ರಾಜ್ಯಗಳು ಸಾಂವಿಧಾನಿಕ ಅಧಿಕಾರ ಹೊಂದಿವೆ ಎಂಬ ಕುರಿತು ಕೆಲ ತಿಂಗಳ ಹಿಂದಷ್ಟೇ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ನೀಡಿದ ಸಾಂವಿಧಾನಿಕ ಪೀಠದಲ್ಲಿ ನ್ಯಾ.ಗವಾಯಿ ಕೂಡಾ ಭಾಗಿಯಾಗಿದ್ದರು. ಈ ತೀರ್ಪಿನಲ್ಲಿ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿನ ಕೆನೆಪದರನ್ನು ಗುರುತಿಸಿ, ಮೀಸಲಾತಿ ಪ್ರಯೋಜನವನ್ನು ನಿರಾಕರಿಸಲು ರಾಜ್ಯಗಳು ನೀತಿಯೊಂದನ್ನು ರೂಪಿಸಬೇಕು ಎಂದು ತಿಳಿಸಿದ್ದರು.
ಗುರುವಾರದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದಂತೆ ಕೆನೆ ಪದರವನ್ನು ಗುರುತಿಸುವ ನೀತಿಯ ಕುರಿತು ಕೇಳಲಾಯಿತು. ಇದಕ್ಕೆ ಉತ್ತರಿಸಿದ ನ್ಯಾ.ಗವಾಯಿ, ಸುಪ್ರೀಂ ಕೋರ್ಟ್ ದೃಷ್ಟಿಯನುಸಾರ ಉಪ ಮೀಸಲಾತಿಗೆ ಅವಕಾಶವಿದೆ ಎಂದರು.
ಇದನ್ನೂ ಓದಿ: ಹೆಣ್ಣಿನ ದೇಹವನ್ನು ಬಣ್ಣಿಸುವುದೂ ಲೈಂಗಿಕ ಕಿರುಕುಳಕ್ಕೆ ಸಮ : ಹೈಕೋರ್ಟ್