ಕರ್ನಾಟಕ

karnataka

ETV Bharat / bharat

ಚುನಾವಣೆಯಲ್ಲಿ ದ್ವೇಷ, ದುಷ್ಟ ಶಕ್ತಿಗಳನ್ನು ಸೋಲಿಸಿ ಎಂದ ಪಾಕ್​ ಮಾಜಿ ಸಚಿವ: 'ಮೊದ್ಲು ನಿಮ್ಮ ದೇಶ ನೋಡಿಕೊಳ್ಳಿ' ಎಂದ ಕೇಜ್ರಿವಾಲ್ - Kejriwal Snubs Ex Pak Minister - KEJRIWAL SNUBS EX PAK MINISTER

ಪಾಕಿಸ್ತಾನದ ಮಾಜಿ ಸಚಿವರೊಬ್ಬರು ದೆಹಲಿ ಸಿಎಂ ಅರವಿಂದ್​​ ಕೇಜ್ರಿವಾಲ್​ ಮತ ಹಾಕಿದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, "ಚುನಾವಣೆಯಲ್ಲಿ ದ್ವೇಷ, ದುಷ್ಟ ಶಕ್ತಿಗಳನ್ನು ಸೋಲಿಸಿ" ಎಂದು ಕರೆ ನೀಡಿದ್ದಾರೆ.

ದೆಹಲಿ ಸಿಎಂ ಮತ ಹಾಕಿದ ಚಿತ್ರ ಹಂಚಿಕೊಂಡ ಪಾಕ್​ ಮಾಜಿ ಸಚಿವ
ದೆಹಲಿ ಸಿಎಂ ಮತ ಹಾಕಿದ ಚಿತ್ರ ಹಂಚಿಕೊಂಡ ಪಾಕ್​ ಮಾಜಿ ಸಚಿವ (ETV Bharat)

By PTI

Published : May 26, 2024, 8:32 AM IST

ನವದೆಹಲಿ:ವಿಪಕ್ಷಗಳ I.N.D.I.A ಕೂಟಕ್ಕೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ ಎಂಬ ಆರೋಪದ ನಡುವೆ ಮತ್ತೊಂದು ವಿವಾದ ಎದ್ದಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​ ಅವರ ಕುಟುಂಬ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಿದ ಚಿತ್ರವನ್ನು ಪಾಕಿಸ್ತಾನದ ಮಾಜಿ ಸಚಿವರೊಬ್ಬರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಬಿಜೆಪಿ ಆಕ್ಷೇಪಕ್ಕೆ ಕಾರಣವಾಗಿದೆ. ಆಪ್​ ನಾಯಕರಿಗೆ ಪಾಕಿಸ್ತಾನದ ಬೆಂಬಲವಿದೆ ಎಂದು ಆರೋಪಿಸಿದೆ.

ಆದರೆ, ಪಾಕ್​ನ ಮಾಜಿ ಸಚಿವನಿಗೆ ದೆಹಲಿ ಸಿಎಂ ತಿರುಗೇಟು ನೀಡಿದ್ದಾರೆ. "ಚುನಾವಣೆ ಭಾರತದ ಆಂತರಿಕ ವಿಚಾರ. ಇದರಲ್ಲಿ ಭಯೋತ್ಪಾದನೆಯನ್ನು ಪೋಷಿಸುವ ರಾಷ್ಟ್ರ (ಪಾಕಿಸ್ತಾನ) ತಲೆದೂರಿಸದಿರಲಿ" ಎಂದಿದ್ದಾರೆ.

ಪಾಕ್​ ಮಾಜಿ ಸಚಿವ ಹೇಳಿದ್ದೇನು?:ಲೋಕಸಭೆಗೆ ನಡೆದ 6ನೇ ಹಂತದ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಕುಟುಂಬ ಮತ ಹಾಕಿದ ಚಿತ್ರವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್, ಚುನಾವಣೆಯಲ್ಲಿ 'ದ್ವೇಷ ಮತ್ತು ದುಷ್ಟ ಶಕ್ತಿಗಳನ್ನು' ಸೋಲಿಸಿ ಎಂದು ಕರೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್​, 'ಚುನಾವಣೆಗಳು ಭಾರತದ ಆಂತರಿಕ ವಿಷಯ. ಇದರಲ್ಲಿ ಭಯೋತ್ಪಾದನೆಯ ಅತಿ ದೊಡ್ಡ ಪ್ರಾಯೋಜಕ ದೇಶದ ಹಸ್ತಕ್ಷೇಪವನ್ನು ಸಹಿಸುವುದಿಲ್ಲ. ಮೊದಲು ನಿಮ್ಮ ದೇಶ ನೋಡಿಕೊಳ್ಳಿ' ಎಂದು ಚಾಟಿ ಬೀಸಿದ್ದಾರೆ.

'ನಮ್ಮ ದೇಶದ ಜನರು ಮತ್ತು ಇಲ್ಲಿನ ಸಮಸ್ಯೆಗಳನ್ನು ನಿಭಾಯಿಸಲು ನಾವು ಸಂಪೂರ್ಣವಾಗಿ ಸಮರ್ಥರಿದ್ದೇವೆ. ನಿಮ್ಮ ಪ್ರತಿಕ್ರಿಯೆ ಅಗತ್ಯವಿಲ್ಲ. ನಿಮ್ಮ ದೇಶದ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಿಮ್ಮನ್ನು ನೀವು ಮೊದಲು ನೋಡಿಕೊಳ್ಳಿ' ಎಂದು ಕೇಜ್ರಿವಾಲ್ ಎಕ್ಸ್‌ನಲ್ಲಿ ಉತ್ತರಿಸಿದ್ದಾರೆ.

ಕೇಜ್ರಿವಾಲ್ ಅವರ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಿರುವ ಪಾಕ್​ ಮಾಜಿ ಸಚಿವ, 'ಚುನಾವಣೆಗಳು ನಿಮ್ಮ ಆಂತರಿಕ ವಿಷಯವೇ ಆಗಿದ್ದರೂ, ದುಷ್ಟ ಶಕ್ತಿಗಳನ್ನು ನೀವು ಬೆಂಬಲಿಸುತ್ತೀರಾ?. ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೂ ಉಗ್ರವಾದ ಕಂಟಕವಾಗಿದೆ. ಈ ಅಪಾಯದ ವಿರುದ್ಧ ಆತ್ಮಸಾಕ್ಷಿಯೊಂದಿಗೆ ಯೋಚಿಸಬೇಕಲ್ಲವೇ?. ನಾವು ಎಲ್ಲಿಯೇ ಇದ್ದರೂ ಇದರ ವಿರುದ್ಧ ಹೋರಾಡಬೇಕಲ್ಲವೇ?' ಎಂದಿದ್ದಾರೆ.

ಕೇಜ್ರಿವಾಲ್​ ವಿರುದ್ಧ ಬಿಜೆಪಿ ಕಿಡಿ:ಈ ಸಂಬಂಧ ಕೇಜ್ರಿವಾಲ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಆಪ್​ ನಾಯಕರ ಭ್ರಷ್ಟಾಚಾರದ ರಾಜಕಾರಣಕ್ಕೆ ಪಾಕಿಸ್ತಾನವೂ ಬೆಂಬಲಕ್ಕೆ ನಿಂತಿದೆ. ಶತ್ರು ರಾಷ್ಟ್ರದೊಂದಿಗೆ ಆಮ್​ ಆದ್ಮಿ ಪಕ್ಷ ಕೈಜೋಡಿಸುತ್ತಿದೆ ಎಂದು ಆರೋಪಿಸಿದೆ.

ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ್​ ಈ ಬಗ್ಗೆ ಹೇಳಿಕೆ ನೀಡಿದ್ದು, ದೇಶದಲ್ಲಿ ಐದು ಹಂತದ ಮತದಾನ ನಡೆದಿದೆ. ಆಗ ಮಾತನಾಡದ ಪಾಕಿಸ್ತಾನ ದೆಹಲಿಯಲ್ಲಿ ಚುನಾವಣೆ ನಡೆದಾಗ, ಆಪ್​ ಬೆಂಬಲಿಸಿ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಡಿದೆ. ಇದು ಕೇಜ್ರಿವಾಲ್‌ ಅವರಿಗೆ ಪಾಕಿಸ್ತಾನದ ಬೆಂಬಲವಿದೆ ಎಂದು ತೋರಿಸುತ್ತದೆ ಎಂದು ದೂರಿದ್ದಾರೆ.

2019ರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಆರೋಪಿಯಾಗಿರುವ ಚೌಧರಿ, ರಾಹುಲ್​ ಗಾಂಧಿ ಅವರನ್ನು ಈ ಹಿಂದೆ ಬೆಂಬಲಿಸಿದ್ದರು. ಈಗ ಕೇಜ್ರಿವಾಲ್​ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ:ಉದ್ಯೋಗದ ಹೆಸರಲ್ಲಿ ಜಮೀನು ಲೂಟಿ ಮಾಡಿದವರ ಬಂಧನಕ್ಕೆ ಕ್ಷಣಗಣನೆ: ಹೆಸರು ಬಳಸದೇ ಆರ್​​ಜೆಡಿ ನಾಯಕನ ವಿರುದ್ಧ ಪ್ರಧಾನಿ ವಾಗ್ದಾಳಿ - PM Modi

ABOUT THE AUTHOR

...view details