ಜೈಪುರ(ರಾಜಸ್ಥಾನ): ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ದೇಶ ಸಜ್ಜಾಗುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಟೀಕಾಪ್ರಹಾರ ಮುಂದುವರೆಸಿದ್ದಾರೆ. ಇಂದು ಹನುಮ ಜಯಂತಿ ಆಚರಣೆಯ ಸಂದರ್ಭದಲ್ಲಿ ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ ಅವರು, "ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸ ಆಲಿಸುವುದೂ ಕೂಡ ಅಪರಾಧವಾಗಿದೆ" ವಾಕ್ಸಮರ ನಡೆಸಿದರು.
ಟೊಂಕ್ನಲ್ಲಿ ಚುನಾವಣಾ ಭಾಷಣ ಮಾಡಿದ ಮೋದಿ, ''ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಬ್ಬರ ನಂಬಿಕೆಯನ್ನು ಅನುಸರಿಸುವುದು ಕೂಡಾ ಕಷ್ಟವಾಗಲಿದೆ. ಜನರ ಸಂಪತ್ತನ್ನು ಕಿತ್ತುಕೊಂಡು 'ಆಯ್ದ' ಜನರಿಗೆ ಹಂಚಲು ಒಳಸಂಚು ರೂಪಿಸುತ್ತಿದ್ದಾರೆ'' ಎಂದು ಆರೋಪಿಸಿದರು.
ಭಾನುವಾರ ಭನಸ್ವರಾದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಸಂಪತ್ತು ಹಂಚಿಕೆ ಕುರಿತು ಕಾಂಗ್ರೆಸ್ ಸಂಚು ರೂಪಿಸಿದೆ ಎಂದು ಮೋದಿ ಹೇಳಿದ್ದರು. ಇದನ್ನು ಇಂದಿನ ಸಭೆಯಲ್ಲೂ ಪ್ರಸ್ತಾಪಿಸಿದ ಅವರು, ''ಎರಡ್ಮೂರು ದಿನಗಳ ಹಿಂದೆ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ, ತುಷ್ಟೀಕರಣ ರಾಜಕಾರಣ ಎಂದು ಬಯಲಿಗೆಳೆದಿದ್ದೆ. ಇದರಿಂದ ಕಾಂಗ್ರೆಸ್ ಮತ್ತು ಅದರ 'ಇಂಡಿಯಾ' ಮೈತ್ರಿಕೂಟಕ್ಕೆ ಕೋಪ ಬಂದಿದೆ. ಹೀಗಾಗಿ ನನ್ನನ್ನು ನಿಂದಿಸಲು ಆರಂಭಿಸಿದ್ದಾರೆ. ಆದರೆ, ನಾನು ದೇಶದ ಮುಂದೆ ಸತ್ಯ ಬಿಚ್ಚಿಟ್ಟಿದ್ದೇನೆ. ನಿಮ್ಮ ಸಂಪತ್ತು ಕಿತ್ತುಕೊಂಡು, ಅದನ್ನು 'ಆಯ್ದ' ಜನರಿಗೆ ನೀಡಲು ಕಾಂಗ್ರೆಸ್ ಪಿತೂರಿ ಮಾಡಿದೆ'' ಎಂದು ಪುನರುಚ್ಚರಿಸಿದರು.
''ಸತ್ಯದ ಬಗ್ಗೆ ಕಾಂಗ್ರೆಸ್ ಯಾಕೆ ಭಯಪಡುತ್ತಿದೆ?. ತನ್ನ ಯೋಜನೆಗಳನ್ನು ಯಾಕೆ ಮುಚ್ಚಿಡುತ್ತಿದೆ?. ಸಂಪತ್ತು ಹಂಚಿಕೆ ಮಾಡುವ ಬಗ್ಗೆ ತನ್ನ ಪ್ರಣಾಳಿಕೆಯಲ್ಲೇ ಕಾಂಗ್ರೆಸ್ ಬರೆದಿದೆ. ಸಂಪತ್ತಿನ ಎಕ್ಸ್ರೇ ಮಾಡಲಾಗುತ್ತದೆ ಎಂದು ಆ ಪಕ್ಷದ ನಾಯಕರೇ ಹೇಳುತ್ತಿದ್ದಾರೆ. ಮೋದಿ ನಿಮ್ಮ ರಹಸ್ಯ ಬಹಿರಂಗಪಡಿಸಿದಾಗ, ನಿಮ್ಮ ಹಿಡನ್ ಅಜೆಂಡಾ ಹೊರಗಡೆ ಇಟ್ಟಾಗ ನಮಗೆ ನಡುಕ ಶುರುವಾಗಿದೆ' ಎಂದು ಮೋದಿ ಕುಟುಕಿದರು.
ಬೆಂಗಳೂರು ಘಟನೆ ಉಲ್ಲೇಖಿಸಿ ವಾಗ್ದಾಳಿ: ಇದೇ ವೇಳೆ, ತಮ್ಮ ಭಾಷಣದಲ್ಲಿ ಬೆಂಗಳೂರಲ್ಲಿ ಅಂಗಡಿ ಮಾಲೀಕನ ಮೇಲೆ ನಡೆದ ಹಲ್ಲೆ ಘಟನೆಯನ್ನು ಉಲ್ಲೇಖಿಸಿ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. "ಇಂದು ಹನುಮ ಜಯಂತಿ ದಿನದಂದು ನಿಮ್ಮೊಂದಿಗೆ ಮಾತನಾಡುವಾಗ ನನಗೆ ಒಂದು ಘಟನೆಯ ಚಿತ್ರಣ ನೆನಪಿಗೆ ಬರುತ್ತದೆ. ಇದರಲ್ಲಿ ಬಹುತೇಕ ಜನರಿಗೆ ಆ ಘಟನೆಯ ಸುದ್ದಿ ತಲುಪಿರುವುದಿಲ್ಲ. ಮಾಧ್ಯಮಗಳಾದರೂ ಆ ವಿಷಯವನ್ನು ನಿಮಗೆ ತಲುಪಿಸಬೇಕಾಗಿತ್ತು. ಅವರೂ (ಮಾಧ್ಯಮಗಳು) ನಿಮಗೆ ತಲುಪಿಸಿಲ್ಲ. ಈ ಘಟನೆ ಕಾಂಗ್ರೆಸ್ ಆಡಳಿತದ ಕರ್ನಾಟಕದ್ದು. ಕೆಲವು ದಿನಗಳ ಹಿಂದೆ ಸಣ್ಣ ಅಂಗಡಿಯವನ ಹಲ್ಲೆ ಮಾಡಲಾಗಿತ್ತು. ಇದಕ್ಕೆ ಕಾರಣವೆಂದರೆ, ತನ್ನ ಅಂಗಡಿಯಲ್ಲಿ ಕುಳಿತುಕೊಂಡು ಆತ ಭಕ್ತಿಭಾವದಿಂದ ಹನುಮಾನ್ ಚಾಲೀಸ ಆಲಿಸುತ್ತಿದ್ದ. ಇದು ಕರ್ನಾಟಕದ ಕಾಂಗ್ರೆಸ್ ಕಾರ್ಯ'' ಎಂದು ಪ್ರಧಾನಿ ಟೀಕಿಸಿದರು.
ಇದನ್ನೂ ಓದಿ:ಮಹಿಳೆಯರ ಮಾಂಗಲ್ಯ, ಸಂಪತ್ತಿನ ಮೇಲೆ ಕಾಂಗ್ರೆಸ್ ಕಣ್ಣು: ಮೂರನೇ ಸಲ ಪ್ರಧಾನಿ ಮೋದಿ ಆರೋಪ