ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸುವ ಬಗ್ಗೆ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಪಡೆದುಕೊಳ್ಳುವುದಕ್ಕಾಗಿ ಭಾರತದ ಚುನಾವಣಾ ಆಯೋಗವು ಶ್ರೀನಗರದ ರಾಜಕೀಯ ಪಕ್ಷಗಳೊಂದಿಗೆ ಸಭೆಗಳನ್ನು ಪ್ರಾರಂಭಿಸಿದೆ. ರಾಜ್ಯದಲ್ಲಿ ಚುನಾವಣೆಗಳು ತೀರಾ ವಿಳಂಬವಾಗುತ್ತಿವೆ ಎಂದು ಅಲ್ಲಿನ ರಾಜಕೀಯ ಪಕ್ಷಗಳು ಆರೋಪಿಸಿವೆ.
ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ಚುನಾವಣಾ ಆಯೋಗ ಇಂದು ಬೆಳಿಗ್ಗೆ ಶ್ರೀನಗರಕ್ಕೆ ಆಗಮಿಸಿದ್ದು, ಬೆಳಗ್ಗೆ 11 ಗಂಟೆಯಿಂದ ಆರು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳೊಂದಿಗೆ ಸಭೆಗಳನ್ನು ಪ್ರಾರಂಭಿಸಲಿದೆ. ಇಬ್ಬರು ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಎಸ್.ಎಸ್.ಸಂಧು ಕೂಎ ಸಿಇಸಿ ಜೊತೆಗೆ ಆಗಮಿಸಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಕಾಂಗ್ರೆಸ್, ಭಾರತೀಯ ಜನತಾ ಪಕ್ಷ, ಸಿಪಿಐ (ಎಂ) ಮತ್ತು ಎನ್ಸಿಪಿ ಈ ಪಾರ್ಟಿಗಳಲ್ಲಿ ಸೇರಿವೆ. ಈ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು ಚುನಾವಣಾ ಆಯೋಗದ ಸಭೆಗೆ ಕಳುಹಿಸಿವೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳನ್ನು ತ್ವರಿತವಾಗಿ ನಡೆಸುವಂತೆ ಈ ಪ್ರತಿನಿಧಿಗಳು ಚುನಾವಣಾ ಆಯೋಗಕ್ಕೆ ಒತ್ತಾಯಿಸಲಿದ್ದಾರೆ.
ಶ್ರೀನಗರಕ್ಕೆ ಆಗಮಿಸಿದ ಚುನಾವಣಾ ಆಯೋಗದ ತಂಡ (ETV Bharat) ಚುನಾವಣಾ ಆಯೋಗದ ತಂಡವು ಮಧ್ಯಾಹ್ನ ಕೇಂದ್ರಾಡಳಿತ ಪ್ರದೇಶದ 20 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಎಸ್ಎಸ್ಪಿಗಳನ್ನು ಮತ್ತು ನಂತರ ಸಂಜೆ ಮುಖ್ಯ ಚುನಾವಣಾ ಅಧಿಕಾರಿ ಪಿ.ಕೆ.ಪೋಲೆ ಮತ್ತು ಇತರ ಚುನಾವಣಾ ಅಧಿಕಾರಿಗಳನ್ನು ಭೇಟಿ ಮಾಡಲಿದೆ.
ಜಮ್ಮುವಿಗೆ ತೆರಳುವ ಮೊದಲು ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಅಟಲ್ ದುಲ್ಲೊ ಮತ್ತು ಪೊಲೀಸ್ ಮಹಾನಿರ್ದೇಶಕರೊಂದಿಗೆ ಶುಕ್ರವಾರ ಶ್ರೀನಗರದಲ್ಲಿ ಸಭೆ ನಡೆಸಲಿದ್ದು, ಅಲ್ಲಿ ಭದ್ರತಾ ಸಂಸ್ಥೆಗಳೊಂದಿಗೆ ಕೂಡ ಸಭೆಗಳನ್ನು ನಡೆಸಲಿದೆ. ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಭೆಗಳಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಮಾಹಿತಿ ನೀಡಲಿದೆ.
ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 30ರೊಳಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಗಡುವು ವಿಧಿಸಿದೆ. ಕಾಶ್ಮೀರದಲ್ಲಿ ಈ ಹಿಂದೆ 2014ರಲ್ಲಿ ಕೊನೆಯ ಬಾರಿಗೆ ಚುನಾವಣೆ ನಡೆದಿದ್ದವು. ಆಗ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರ ರಚಿಸಿದ್ದವು. ಆದರೆ ಜೂನ್ 2018ರಲ್ಲಿ ಸರ್ಕಾರ ಪತನಗೊಂಡ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಯಿತು.
370ನೇ ವಿಧಿಯನ್ನು ರದ್ದುಪಡಿಸಿದ ನಂತರ, ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದ ಆಡಳಿತವನ್ನು ಲೆಫ್ಟಿನೆಂಟ್ ಗವರ್ನರ್ ಮತ್ತು ಅವರ ಏಕೈಕ ಸಲಹೆಗಾರ ನಿರ್ವಹಿಸುತ್ತಿದ್ದಾರೆ. ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸಬೇಕು ಮತ್ತು ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಬೇಕು ಎಂದು ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿವೆ.
ಇದನ್ನೂ ಓದಿ: 2 ದಿನ ಅಲ್ಲ ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಚೆಕ್ ಪಟಾಪಟ್ ಕ್ಲಿಯರೆನ್ಸ್: ಆರ್ಬಿಐ ಮಹತ್ವದ ಘೋಷಣೆ - CLEARING TIME FOR CHEQUES