ಕರ್ನಾಟಕ

karnataka

ETV Bharat / bharat

ಚಲಿಸುತ್ತಿದ್ದ ರೈಲಿನಿಂದ ಹಳಿಗೆ ಬಿದ್ದ ವೃದ್ಧೆಯ ರಕ್ಷಿಸಿದ ಟ್ರ್ಯಾಕ್​ಮ್ಯಾನ್, ಆರ್‌ಪಿಎಫ್ ಸಿಬ್ಬಂದಿ - WOMAN FALL FROM MOVING TRAIN

ಆನೆಗಳ ಚಲನವಲವಿರುವ ಪ್ರದೇಶದಲ್ಲಿ ತಡರಾತ್ರಿ ರೈಲಿನಿಂದ ಕೆಳಗೆ ಬಿದ್ದ ವೃದ್ಧೆಯನ್ನು ಟ್ರ್ಯಾಕ್​ಮ್ಯಾನ್​ ಹಾಗೂ ಆರ್​ಪಿಎಫ್​ ಸಹಾಯದಿಂದ ರಕ್ಷಿಸಿ ಆಕೆಯ ಕುಟುಂಬವನ್ನು ಸೇರಿಸಲಾಯಿತು.

Parvati reunited with son by efforts of RPF personnel
ಆರ್‌ಪಿಎಫ್ ಸಿಬ್ಬಂದಿ ಪ್ರಯತ್ನದಿಂದ ಪುತ್ರನೊಂದಿಗೆ ಮತ್ತೆ ಸೇರಿಕೊಂಡ ಪಾರ್ವತಿ (ETV Bharat)

By ETV Bharat Karnataka Team

Published : Nov 22, 2024, 1:06 PM IST

ಸಂಬಲ್​ಪುರ(ಒಡಿಶಾ): ಪುರಿಯಿಂದ ಅಹಮದಾಬಾದ್​ಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ರೈಲಿನಿಂದ 76 ವರ್ಷದ ಮಹಿಳೆಯೊಬ್ಬರು ಹಳಿಗೆ ಬಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಒಡಿಶಾದ ಸಂಬಲ್​ಪುರದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಅಲ್ಪಸ್ವಲ್ಪ ಗಾಯಗೊಂಡಿದ್ದ ಮಹಿಳೆ ಪಾರ್ವತಿ ದಾಸ್​ ಅವರನ್ನು ರೆಬಾಚೋಲ್ ಆರ್‌ಪಿಎಫ್ ನೆರವಿನಿಂದ ರಕ್ಷಿಸಿ, ಪ್ರಥಮ ಚಿಕಿತ್ಸೆ ನೀಡಿ ಮನೆಯವರಿಗೆ ಹಸ್ತಾಂತರಿಸಲಾಗಿದೆ.

ಎಎಸ್​ಐ ಮನೋಜ್​ ಕುಮಾರ್​ ಸಮಾಲ್ ಅವರು ಹೇಳುವ ಪ್ರಕಾರ, ಕೇಂದ್ರಪಾರ ಜಿಲ್ಲೆಯ ಬರೌ, ಪೊಯಿಪಟ್​ನ ಪ್ರದ್ಯುಮ್ನ​ ದಾಸ್​ ಅವರು ತಮ್ಮ ಪತ್ನಿ, ಮಗಳು ಹಾಗೂ ತಾಯಿ (ಪಾರ್ವತಿ ದಾಸ್)​ ಅವರೊಂದಿಗೆ ಪುರಿ-ಅಹಮದಾಬಾದ್​ ಎಕ್ಸ್​ಪ್ರೆಸ್​ನಲ್ಲಿ ಭುವನೇಶ್ವರದಿಂದ ಅಹಮದಾಬಾದ್​ಗೆ ಪ್ರಯಾಣಿಸುತ್ತಿದ್ದರು. ತಡರಾತ್ರಿ 3 ಗಂಟೆ ಸುಮಾರಿಗೆ ಕುಟುಂಬದವರೆಲ್ಲರೂ ರೈಲಿನಲ್ಲಿ ಮಲಗಿದ್ದಾಗ, ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಪಾರ್ವತಿ ದಾಸ್​ ಅವರು ಸಂಬಲ್​ಪುರ ಹತಿಬರಿ ನಿಲ್ದಾಣದ ಬಳಿ ತಮ್ಮ ಸೀಟ್​ನಿಂದ ಎದ್ದು ರೈಲಿನ ಬಾಗಿಲಿನ ಕಡೆಗೆ ಹೋಗಿದ್ದಾರೆ. ಅಲ್ಲಿ ನಡೆದಾಡುತ್ತಿದ್ದಾಗ ಜಾರಿ ಹಳಿ ಮೇಲೆ ಬಿದ್ದಿದ್ದಾರೆ. ಹತಿಬರಿ ಪ್ರದೇಶದಲ್ಲಿ ಆನೆಗಳ ಚಲನವಲನ ಇರುವುದರಿಂದ ಪಾರ್ವತಿ ಅವರು ಬಿದ್ದಾಗ ರೈಲಿನ ವೇಗ ತುಲನಾತ್ಮಕವಾಗಿ ಕಡಿಮೆಯಾಗಿತ್ತು. ಈ ವಿಷಯ ಮನೆಯವರಿಗೆ ತಿಳಿಯುವಷ್ಟರಲ್ಲಿ ರೈಲು ಆಗಲೇ ಸುಮಾರು 70 ಕಿ.ಮೀ ದೂರದಲ್ಲಿರುವ ಬರ್ಗಢ್​ ನಿಲ್ದಾಣವನ್ನು ತಲುಪಿತ್ತು.

ವೃದ್ಧೆಯನ್ನು ರಕ್ಷಿಸಿದ ಟ್ರ್ಯಾಕ್​ಮ್ಯಾನ್​: ಏನು ಮಾಡಬೇಕೆಂದು ತೋಚದೆ ಹಳಿ ಮೇಲೆ ನಿಂತಿದ್ದ 76 ವರ್ಷದ ಪಾರ್ವತಿ ದಾಸ್​ ಅವರನ್ನು ಅಲ್ಲೇ ಕೆಲಸ ಮಾಡುತ್ತಿದ್ದ ಟ್ರ್ಯಾಕ್​ಮ್ಯಾನ್​ ಗಮನಿಸಿದ್ದಾರೆ. ಆ ಕತ್ತಲ ಹೊತ್ತಲ್ಲಿ ರೈಲ್ವೇ ಹಳಿಯಲ್ಲಿ ವೃದ್ಧೆಯನ್ನು ಕಂಡು ಅನುಮಾನಗೊಂಡ ಟ್ರ್ಯಾಕ್​ಮ್ಯಾನ್​ ಅವರನ್ನು ರಕ್ಷಿಸಿ, ಹತಿಬರಿಯಲ್ಲಿ ಕೆಲಸ ಮಾಡುತ್ತಿದ್ದ ಆರ್​ಪಿಎಫ್​ ಅಧಿಕಾರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆರ್​ಪಿಎಫ್​ ಅಧಿಕಾರಿ ಪಾರ್ವತಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪರಿಣಾಮ ಪಾರ್ವತಿ ಅವರ ತಲೆ ಹಾಗೂ ಕೈಗೆ ಗಾಯಗಳಾಗಿವೆ.

ಮಗನನ್ನು ಸೇರಿದ ತಾಯಿ: ಇದೇ ವೇಳೆ ಪುತ್ರ ಪ್ರದ್ಯುಮ್ನ​ ಬರ್ಗಢ್​​ ನಿಲ್ದಾಣದಲ್ಲಿ ಇಳಿದು, ತನ್ನ ತಾಯಿ ನಾಪತ್ತೆಯಾಗಿರುವ ಬಗ್ಗೆ ಆರ್​ಪಿಎಫ್​ಗೆ ಮಾಹಿತಿ ನೀಡಿದ್ದಾರೆ. ಬರ್ಗಢ್​ ಆರ್​ಪಿಎಫ್​ ರೆಬಾಚೋಲ್​ ಆರ್​ಪಿಎಫ್​ ಅನ್ನು ಸಂಪರ್ಕಿಸಿದೆ. ರೆಬಾಚೋಲ್​ ಆರ್​ಪಿಎಫ್​ ಹತಿಬರಿಯಲ್ಲಿ ರಕ್ಷಿಸಲ್ಪಟ್ಟ ಪಾರ್ವತಿ ಅವರನ್ನು ಬರ್ಗಢ್​ ಆರ್​ಪಿಎಫ್​ಗೆ ವಿಡಿಯೋ ಕರೆ ಮೂಲಕ ತೋರಿಸಿದ್ದಾರೆ. ಮಗ ತನ್ನ ತಾಯಿಯನ್ನು ಗುರುತಿಸಿದ ನಂತರ, ರೆಬಾಚೋಲ್​ ಆರ್​ಪಿಎಫ್​ ವೃದ್ಧೆ ಪಾರ್ವತಿ ಅವರನ್ನು ಆಂಬ್ಯುಲೆನ್ಸ್​ ಮೂಲಕ ಸಂಬಲ್​ಪುರ ಜಿಲ್ಲಾ ಜನರಲ್​ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಇದಲ್ಲದೇ ಪಾರ್ವತಿ ಅವರ ಪುತ್ರ ಪ್ರದ್ಯುಮ್ನ ಅವರನ್ನು ಬರ್ಗಢ್​ನಿಂದ ಸಂಬಲ್‌ಪುರ ಜಿಲ್ಲಾ ಜನರಲ್ ಆಸ್ಪತ್ರೆಗೆ ಕರೆಸಲಾಗಿದ್ದು, ಅಲ್ಲಿ ಆಧಾರ್ ಕಾರ್ಡ್ ಪರಿಶೀಲಿಸಿ ಪಾರ್ವತಿ ಅವರನ್ನು ಮಗನಿಗೆ ಹಸ್ತಾಂತರಿಸಲಾಯಿತು.

ತಾಯಿಯ ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರೈಲ್ವೆ ಸಿಬ್ಬಂದಿ ಮತ್ತು ಟ್ರ್ಯಾಕ್​ಮ್ಯಾನ್​ಗೆ ಮಗ ಪ್ರದ್ಯುಮ್ನ ಕೃತಜ್ಞತೆ ಸಲ್ಲಿಸಿದರು. ಆ ನಂತರ ತಾಯಿ ಮತ್ತು ಮಗ ಪ್ಯಾಸೆಂಜರ್ ರೈಲಿನಲ್ಲಿ ಭುವನೇಶ್ವರಕ್ಕೆ ಮರಳಿದರು.

ಇದನ್ನೂ ಓದಿ:ಅಪಹರಣಕ್ಕೊಳಗಾದ ಒಂದೂವರೆ ತಿಂಗಳ ಮಗು ರೈಲು ನಿಲ್ದಾಣದಲ್ಲಿ ಪತ್ತೆ: ಮಹಿಳೆ ಸೇರಿ ಇಬ್ಬರ ಬಂಧನ

ABOUT THE AUTHOR

...view details