ನವದೆಹಲಿ: ರಷ್ಯಾದ ಸೇನೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡಲು ತೆರಳಿದ್ದ ಕನಿಷ್ಠ 20 ಭಾರತೀಯರು ಆ ದೇಶದಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಶೀಘ್ರ ಬಿಡುಗಡೆ ಮಾಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ. ಸೆಕ್ಯುರಿಟಿ ಗಾರ್ಡ್ ಉದ್ಯೋಗ ನೀಡುವ ಸುಳ್ಳು ನೆಪದಲ್ಲಿ ಏಜೆಂಟರು ಭಾರತೀಯ ಯುವಕರ ಗುಂಪನ್ನು ಮೋಸದಿಂದ ರಷ್ಯಾಕ್ಕೆ ಕಳುಹಿಸಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವಾಲಯ ಈ ಬಗ್ಗೆ ಕಾರ್ಯೋನ್ಮುಖವಾಗಿದೆ.
"ರಷ್ಯಾ ಸೇನೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಅಥವಾ ಸಹಾಯಕರಾಗಿ ಕೆಲಸ ಮಾಡಲು ಹೋದ 20 ಕ್ಕೂ ಹೆಚ್ಚು ಜನರಿದ್ದಾರೆ ಎಂಬುದು ತಿಳಿದು ಬಂದಿದೆ. ಇವರು ನಮ್ಮನ್ನು ಸಂಪರ್ಕಿಸಿದ್ದಾರೆ ಹಾಗೂ ಅವರನ್ನು ಶೀಘ್ರವಾಗಿ ಬಿಡುಗಡೆ ಮಾಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ" ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ ಸಾಪ್ತಾಹಿಕ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ರಷ್ಯಾದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಸೂಕ್ತ ಎಚ್ಚರಿಕೆ ವಹಿಸಬೇಕು ಮತ್ತು ಸಂಘರ್ಷದಿಂದ (ಉಕ್ರೇನ್ ಜೊತೆ) ದೂರವಿರಬೇಕು ಎಂದು ಎಂಇಎ ಹೊರಡಿಸಿದ ಹೇಳಿಕೆಗಳನ್ನು ವಕ್ತಾರರು ಉಲ್ಲೇಖಿಸಿದರು. "ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ... ಇಲ್ಲಿ ನವದೆಹಲಿ ಮತ್ತು ಮಾಸ್ಕೋದಲ್ಲಿನ ರಷ್ಯಾದ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ. ಎಲ್ಲಾ ಭಾರತೀಯರ ಸುರಕ್ಷತೆಗಾಗಿ ಬದ್ಧರಾಗಿದ್ದೇವೆ" ಎಂದು ಜೈಸ್ವಾಲ್ ಸುದ್ದಿಗಾರರಿಗೆ ತಿಳಿಸಿದರು. ಈ ವಿಷಯದಲ್ಲಿ ಕೆಲ ತಪ್ಪು ಮಾಹಿತಿಗಳು ಮಾಧ್ಯಮಗಳಲ್ಲಿ ವರದಿಯಾಗಿವೆ ಎಂದೂ ಅವರು ನುಡಿದರು.