ರಾಂಚಿ: ರಾಂಚಿಯಲ್ಲಿ ನಡೆದ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಜೈಲಿನಲ್ಲಿರುವ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ವಿರುದ್ಧ ಇಂದು ಆರೋಪಪಟ್ಟಿ ಸಲ್ಲಿಸಿದೆ. 5,000 ಪುಟಗಳ ದಾಖಲೆಗಳನ್ನು ಹೊತ್ತು ತಂದ ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ತಲುಪಿಸಿದ್ದಾರೆ.
ಕೋಟ್ಯಂತರ ರೂಪಾಯಿ ಬೆಲೆಬಾಳುವ ಭಾರತೀಯ ಸೇನೆಗೆ ಸೇರಿದ ಭೂಮಿ ಕಬಳಿಕೆ ಮಾಡಿದ ಆರೋಪ ಎದುರಿಸುತ್ತಿರುವ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ನಾಯಕ, ಸಿಎಂ ಹೇಮಂತ್ ಸೊರೆನ್ ಅವರನ್ನು ಜನವರಿ 31 ರಂದು ಬಂಧಿಸಲಾಗಿದೆ. ಇಂದಿಗೆ ಅವರ 60 ದಿನಗಳ ನ್ಯಾಯಾಂಗ ಬಂಧನ ಪೂರ್ಣಗೊಂಡಿದೆ. ಕಾನುನೂನಡಿ ಇಡಿ ಅಧಿಕಾರಿಗಳು 60 ದಿನಗಳಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಬೇಕು. ಅದರಂತೆ ಇಡಿ ತಂಡ 60 ದಿನಗಳೊಳಗೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಚಾರ್ಜ್ ಶೀಟ್ ಸಲ್ಲಿಕೆಯಾದ ನಂತರ ಇದೀಗ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಚಾರ್ಜ್ ಶೀಟ್ ಆಧರಿಸಿ ನ್ಯಾಯಾಲಯ ಮುಂದಿನ ಕ್ರಮ ಕೈಗೊಳ್ಳಲಿದೆ. ಜೈಲು ಸೇರುತ್ತಿದ್ದಂತೆ ಹೇಮಂತ್ ಸೊರೆನ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಚಂಪೈ ಸೊರೆನ್ ಅವರನ್ನು ಆಯ್ಕೆ ಮಾಡಲಾಗಿದೆ.