ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಇಂದು ಪ್ರಕಟಿಸಲಿದೆ. ಮಧ್ಯಾಹ್ನ 3.30ಕ್ಕೆ ಆಯೋಗ ಪತ್ರಿಕಾಗೋಷ್ಠಿ ನಡೆಸಲಿದೆ. ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದ ಪ್ಲೀನರಿ ಹಾಲ್‌ನಲ್ಲಿ ಈ ಸುದ್ದಿಗೋಷ್ಠಿ ನಡೆಯಲಿದೆ.
288 ಸ್ಥಾನಗಳ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 26 ರಂದು ಮತ್ತು 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆ ಅವಧಿಯು ಜನವರಿ 5, 2025 ರಂದು ಕೊನೆಗೊಳ್ಳಲಿದೆ. ಅದಕ್ಕೂ ಮುನ್ನ ನಿಯಮಾನುಸಾರ ಸಂಪೂರ್ಣ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.
50 ಕ್ಷೇತ್ರಗಳಲ್ಲಿ ಉಪ ಚುನಾವಣೆ ಘೋಷಣೆ ಸಾಧ್ಯತೆ: ಸುಮಾರು 50 ಕ್ಷೇತ್ರಗಳ ಉಪಚುನಾವಣೆಗಳು ಸಹ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಇವುಗಳಿಗೂ ಸಹ ಚುನಾವಣಾ ದಿನಾಂಕಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.
ಸೆಪ್ಟೆಂಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯ ಸಿದ್ಧತೆಗಳನ್ನು ನಿರ್ಣಯಿಸಲು, ECIನ ಉನ್ನತ ಅಧಿಕಾರಿಗಳನ್ನು ಒಳಗೊಂಡ ತಂಡವು ಪರಿಸ್ಥಿತಿಯನ್ನು ಅವಲೋಕಿಸಲು ಮುಂಬೈಗೆ ತೆರಳಿತ್ತು. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಚುನಾವಣಾ ಆಯುಕ್ತರು ಅಲ್ಲಿನ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಸಹ ಭೇಟಿ ಮಾಡಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು.
ಇದನ್ನು ಓದಿ:ಮುಂದಿನ ವಾರ ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ ಸಾಧ್ಯತೆ
ಇತ್ತೀಚೆಗಷ್ಟೇ ಜಾರ್ಖಂಡ್‌ಗೆ ಪ್ರವಾಸ ಕೈಗೊಂಡಿದ್ದ ಸಿಇಸಿ ರಾಜೀವ್ ಕುಮಾರ್, ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ನೇತೃತ್ವದ ತಂಡವು, ರಾಜಕೀಯ ಪಕ್ಷಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತ್ತು. ಬಿಜೆಪಿ, ಕಾಂಗ್ರೆಸ್ ಮತ್ತು ಸಿಪಿಐ(ಎಂ) ಮತ್ತು ಮೂರು ಪ್ರಾದೇಶಿಕ ಪಕ್ಷಗಳಾದ ಜೆಎಂಎಂ, ಆರ್‌ಜೆಡಿ ಮತ್ತು ಎಜೆಎಸ್‌ಯು ಸೇರಿದಂತೆ ಆರು ರಾಷ್ಟ್ರೀಯ ಪಕ್ಷಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದರು.
ದಿನಾಂಕ ಪ್ರಕಟಿಸಿದರೆ ಇಂದಿನಿಂದಲೇ ನೀತಿ ಸಂಹಿತೆ ಜಾರಿ:ಕೇಂದ್ರ ಚುನಾವಣಾ ಆಯೋಗ ಇಂದು ವೇಳಾಪಟ್ಟಿ ಪ್ರಕಟಿಸಿದರೆ, ಮಾದರಿ ನೀತಿ ಸಂಹಿತೆಯೂ ಜಾರಿಗೆ ಬರಲಿದೆ. ಎರಡೂ ರಾಜ್ಯಗಳ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಪ್ರಕಟಿಸಿ, ಚುನಾವಣಾ ಅಖಾಡಕ್ಕೆ ದುಮುಕುವ ಸಾಧ್ಯತೆ ಇದೆ. ಮಹಾರಾಷ್ಟ್ರದಲ್ಲಿ, ಬಿಜೆಪಿ, ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಆಡಳಿತಾರೂಢ ಮಹಾಯುತಿ ಒಕ್ಕೂಟ ಮತ್ತು ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ(UBT) ಮಹಾ ವಿಕಾಸ್ ಅಘಾಡಿ ನಡುವೆ ಸ್ಪರ್ಧೆಯಿದೆ.
ಜಾರ್ಖಂಡ್‌ನಲ್ಲಿ, ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)-ಕಾಂಗ್ರೆಸ್ ಮೈತ್ರಿ (ಇಂಡಿಯಾ ಬ್ಲಾಕ್) ಆಲ್ ಜಾರ್ಖಂಡ್ ವಿದ್ಯಾರ್ಥಿ ಸಂಘ (ಎಜೆಎಸ್‌ಯು), ಜನತಾ ದಳ (ಯುನೈಟೆಡ್) ಮತ್ತು ಬಿಜೆಪಿಯನ್ನು ಒಳಗೊಂಡಿರುವ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ವಿರುದ್ಧ ಸೆಣಸಲಿದೆ.
ಇದನ್ನು ಓದಿ:ಬಾಬಾ ಸಿದ್ದಿಕ್ ಹತ್ಯೆ ಹಿಂದೆ ಗುಜರಾತ್ ಗ್ಯಾಂಗ್‌ಸ್ಟರ್‌ಗಳ ಕೈವಾಡ: ಸಂಜಯ್ ರಾವತ್ ಆರೋಪ