ತೇಜ್‌ಪುರ:ಚುನಾವಣೆಯನ್ನು ಪ್ರಜಾಪ್ರಭುತ್ವದ ಹಬ್ಬ ಎಂದೇ ಪರಿಗಣಿಸಲಾಗುತ್ತದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ಭಾರತದಲ್ಲಿ ಈ ಹಬ್ಬ ಅಷ್ಟು ಚಿಕ್ಕದೇನಲ್ಲ. ಹೆಚ್ಚಿನ ಸಂಖ್ಯೆಯ ಚುನಾವಣಾ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ತಮ್ಮ ಅವಿರತ ಪ್ರಯತ್ನದಿಂದ ಈ ಹಬ್ಬವನ್ನು ಯಶಸ್ವಿಗೊಳಿಸುತ್ತಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆ ದುರ್ಗಮ ಭೂಪ್ರದೇಶ, ಹದಗೆಟ್ಟ ರಸ್ತೆಗಳ ಮೂಲಕ ಎರಡು ದಿನಗಳ ಪ್ರಯಾಣದ ರೂಪದಲ್ಲಿ ಅದನ್ನು ಸಾಕಾರಗೊಳಿಸುವ ಪ್ರಯತ್ನ ನಡೆಯುತ್ತದೆ.
ಲೋಕಸಭೆಯ ಮೊದಲ ಹಂತದ ಚುನಾವಣೆ ಮತ್ತು ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆಯೂ ಏಪ್ರಿಲ್ 19ರಂದು ನಡೆಯಲಿದೆ. ಇಂತಹ ಸಂದರ್ಭದಲ್ಲಿ ಭದ್ರತಾ ಪಡೆಗಳು, ಮತಗಟ್ಟೆ ಅಧಿಕಾರಿಗಳನ್ನೊಳಗೊಂಡ ಚುನಾವಣಾ ಆಯೋಗದ ತಂಡವು ಬುಧವಾರ ಭಾರತ-ಚೀನಾ ಇಂಡೋ-ಟಿಬೆಟಿಯನ್ ಗಡಿಯಲ್ಲಿರುವ ಮತದಾನ ಕೇಂದ್ರಕ್ಕೆ ತೆರಳಿದೆ. ಈ ಮತದಾನ ಕೇಂದ್ರವು ಭಾರತ-ಚೀನಾ ಗಡಿಯ ಸಮೀಪದಲ್ಲಿದೆ ಎಂಬುವುದು ಗಮನಾರ್ಹ.
ಪಶ್ಚಿಮ ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಮಕ್ಟೋ ವಿಧಾನಸಭಾ ಕ್ಷೇತ್ರದ ಲುಗುಥಾಂಗ್ ಮತಗಟ್ಟೆಯು ದೇಶದ ಅತಿ ಎತ್ತರದ ಮತದಾನ ಕೇಂದ್ರವಾಗಿದೆ. ಈ ಮತದಾನ ಕೇಂದ್ರವು 13,383 ಅಡಿ ಎತ್ತರದಲ್ಲಿದೆ. ಈ ಪ್ರದೇಶದಲ್ಲಿ ಯಾವುದೇ ಸಂಪರ್ಕ ಸಾಧನವಿಲ್ಲ. ವೈರ್‌ಲೆಸ್ ಸಂಪರ್ಕದ ಮೂಲಕ ಮಾತ್ರ ಸಂವಹನ ಸಾಧ್ಯವಾಗುತ್ತದೆ. ಮತಗಟ್ಟೆಗೆ ತಲುಪಲು ಎರಡು ದಿನ ಬೇಕಾಗುವ ಕಾರಣ ಮತಗಟ್ಟೆ ಸ್ಥಾಪಿಸಲು ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಜಿಲ್ಲಾ ಕೇಂದ್ರವಾದ ತವಾಂಗ್‌ನಿಂದ ಬುಧವಾರವೇ ತೆರಳಿದ್ದರು. ಅತ್ಯಂತ ದೂರದ ಪ್ರದೇಶದಲ್ಲಿರುವ ಲಗುಥಾಂಗ್ ಮತದಾನ ಕೇಂದ್ರ ತಲುಪಬೇಕಿದ್ದರೆ, ತವಾಂಗ್‌ನಿಂದ ಜಂಗ್‌ಗೆ ಮತ್ತು ಜಂಗ್‌ನಿಂದ ಖಿರ್ಮುವೊಗೆ 12 ಗಂಟೆಗಳ ಕಾಲ ನಡೆಯಬೇಕು.