ನವದೆಹಲಿ:ಅಮೆರಿಕದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಸಮಾರಂಭದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಜೈಶಂಕರ್ ಅಮೆರಿಕಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಟ್ರಂಪ್ ಆಡಳಿತದ ಪ್ರತಿನಿಧಿಗಳೊಂದಿಗೆ ಸಭೆ ನಡೆಸುವರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಭಾನುವಾರ ತಿಳಿಸಿದೆ.
''ಟ್ರಂಪ್-ವಾನ್ಸ್ ಪದಗ್ರಹಣ ಸಮಿತಿಯ ಆಹ್ವಾನದ ಮೇರೆಗೆ, ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್.ಜೈಶಂಕರ್ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ 47ನೇ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಜೆ.ಟ್ರಂಪ್ ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾರತ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ'' ಎಂದು ಸಚಿವಾಲಯ ಮಾಹಿತಿ ನೀಡಿದೆ.
ನವೆಂಬರ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್, ಹಾಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿದ್ದರು.