ಮುಂಬೈ, ಮಹಾರಾಷ್ಟ್ರ: ಬುಧವಾರ ನಾಗ್ಪುರದಲ್ಲಿ ನಡೆದ ರಾಹುಲ್ ಗಾಂಧಿ ಅವರ ಸಂವಿಧಾನ್ ಸಮ್ಮಾನ್ ಸಮ್ಮೇಳನದ ಸಮಾವೇಶದಲ್ಲಿ ಸಂವಿಧಾನದ ಪ್ರತಿ ಎಂದು ಖಾಲಿ ನೋಟ್‌ಬುಕ್ ಹಂಚಿರುವುದನ್ನು ಭಾರತೀಯ ಜನತಾ ಪಕ್ಷ ಗುರುವಾರ ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಸುಳ್ಳುಗಳನ್ನು ಹರಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂವಿಧಾನದ ಪ್ರತಿ ಎಂದು ಖಾಲಿ ನೋಟ್‌ಪ್ಯಾಡ್ ತೋರಿಸುವ ಮೂಲಕ ಸಂವಿಧಾನವನ್ನು ಬರೆಯುವ ಪಕ್ಷದ ಯೋಜನೆಯನ್ನು ರಾಹುಲ್ ಬಹಿರಂಗ ಪಡಿಸಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಸಂವಿಧಾನವನ್ನು ತನಗೆ ಬೇಕಾದಂತೆ ಬರೆಯುವ ಯೋಜನೆಯೇ?: ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕೇಶವ ಉಪಾಧ್ಯೆ ಎಕ್ಸ್ ಪೋಸ್ಟ್ನಲ್ಲಿ ಹೀಗೆ ಹೇಳಿದ್ದಾರೆ “ಖಾಲಿ ನೋಟ್‌ಪ್ಯಾಡ್‌ಗೆ ಸಂವಿಧಾನದ ಹೆಸರನ್ನು ನೀಡುವ ಮೂಲಕ, ಸಂವಿಧಾನವನ್ನು ತನಗೆ ಬೇಕಾದಂತೆ ಬರೆಯುವ ಯೋಜನೆಯನ್ನು ಕಾಂಗ್ರೆಸ್ ಪರೋಕ್ಷವಾಗಿ ಬಹಿರಂಗಪಡಿಸಿದೆಯೇ? ಇಲ್ಲವಾದಲ್ಲಿ ಸಂವಿಧಾನ ನೀಡಿರುವ ಮೀಸಲಾತಿಯನ್ನು ರದ್ದು ಮಾಡುವುದಾಗಿ ಕಾಂಗ್ರೆಸ್ ಕಳೆದ ಕೆಲವು ದಿನಗಳಿಂದ ಮಾತನಾಡುತ್ತಿದೆ. ಕಾಂಗ್ರೆಸ್‌ಗೆ ಬೆಂಬಲ ನೀಡುವುದು ಎಂದರೆ ಸಂವಿಧಾನವನ್ನು ಕೊಲ್ಲುವುದು ಎಂದು ಅರ್ಥವೇ ಎಂದು ಅವರು ಎಕ್ಸ್ ಹ್ಯಾಂಡಲ್ ಮೂಲಕ ಪ್ರಶ್ನಿಸಿದ್ದಾರೆ.
ಬಿಜೆಪಿ ನಕಲಿ ಸುದ್ದಿಯನ್ನು ಹರಡುತ್ತಿದೆ:ಈ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖ್ಯ ವಕ್ತಾರ ಅತುಲ್ ಲೋಂಧೆ, ಬಿಜೆಪಿ ನಕಲಿ ಸುದ್ದಿಯನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ. ರಾಹುಲ್ ಗಾಂಧಿಯವರು ಸಂವಿಧಾನದ ಪ್ರತಿಯನ್ನು ಹೊತ್ತೊಯ್ದರೆ, ಅದನ್ನು ಉಳಿಸುವ ಪಕ್ಷದ ಸಂಕಲ್ಪವನ್ನು ಪುನರುಚ್ಚರಿಸಿದರೆ, ಬಿಜೆಪಿಯವರು ಏಕೆ ವಿಚಲಿತರಾಗಿದ್ದಾರೆ ಎಂದು ಮರು ಪ್ರಶ್ನೆ ಮಾಡಿದ್ದಾರೆ.