ಬೆತುಲ್ (ಮಧ್ಯಪ್ರದೇಶ):ಸಿಸೇರಿಯನ್ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಹೊಟ್ಟೆಯಲ್ಲಿ ಬಿಟ್ಟಿದ್ದ ಟವೆಲ್ ಅನ್ನು ಮೂರು ತಿಂಗಳ ಬಳಿಕ ವೈದ್ಯರು ಮತ್ತೊಮ್ಮೆ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಮಧ್ಯ ಪ್ರದೇಶದ ಆಮ್ಲಾ ನಿವಾಸಿ ಗಾಯತ್ರಿ ರಾವತ್, ಹೊಟ್ಟೆಯಲ್ಲಿ ಟವೆಲ್ ಸೇರಿದ ಹಿನ್ನೆಲೆ ಅಸಾಧ್ಯ ನೋವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ವೇಳೆ, ಶಸ್ತ್ರ ಚಿಕಿತ್ಸೆ ನಡೆಸಿದ ಖಾಸಗಿ ಆಸ್ಪತ್ರೆ ವೈದ್ಯರು ಹೊಟ್ಟಯಲ್ಲಿದ್ದ ಟವೆಲ್ ಹೊರ ತೆಗೆದಿದ್ದಾರೆ. ಮೂರು ತಿಂಗಳಿನಿಂದ ಹೊಟ್ಟೆಯಲ್ಲಿ ಟವೆಲ್ ಇದ್ದ ಕಾರಣ ಮಹಿಳೆಯ ಕರುಳುಗಳಿಗೆ ಹಾನಿಯಾಗಿದೆ. ಇದೀಗ ಈ ಪ್ರಕರಣ ಹೊರ ಬಂದಿದ್ದು, ತಕ್ಷಣಕ್ಕೆ ಈ ಪ್ರಕರಣದ ತನಿಖೆಗೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಜೊತೆಗೆ ನಿರ್ಲಕ್ಷ್ಯವಹಿಸಿದ ವೈದ್ಯಕೀಯ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ.
ಏನಿದು ಘಟನೆ?:ಮೂರು ತಿಂಗಳ ಹಿಂದೆ ಬೆತುಲಾದ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳೆ ಪ್ರಸವಕ್ಕೆ ಆಗಮಿಸಿದ್ದರು. ಈ ವೇಳೆ, ಸಿಸೇರಿಯನ್ ಮೂಲಕ ಮಗುವನ್ನು ಹೊರ ತೆಗೆದ ವೈದ್ಯರು, ಮಹಿಳೆಯ ಹೊಟ್ಟೆಯಲ್ಲಿ ಟವೆಲ್ ಬಿಡುವ ಮೂಲಕ ವೈದ್ಯಕೀಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದ ಕುಟುಂಬ, ಕಠಿಣ ಕ್ರಮಕ್ಕೆ ಆಗ್ರಹಿಸಿತ್ತು. ಮಹಿಳೆ ಗಂಡ ಮತ್ತು ತಂದೆ ಸಾಮಾನ್ಯ ಕೂಲಿಕಾರರಾಗಿದ್ದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ಶಸ್ತ್ರ ಚಿಕಿತ್ಸೆಗಾಗಿ ಸಾಲ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಈ ಘಟನೆ ಬೆಳಕಿಗೆ ಬಂದ ಹಿನ್ನೆಲೆ ಮಾತನಾಡಿರುವ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ ರವಿಕಾಂತ್ ಉಯಿಕೆ, ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳೆ ಹೊಟ್ಟೆಯಲ್ಲಿ ಬಟ್ಟೆ ಬಿಟ್ಟ ವಿಚಾರ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ. ಈ ಪ್ರಕರಣಕ್ಕೆ ಸಂಬಂದಪಟ್ಟಂತೆ ತನಿಖೆ ಮಾಡುತ್ತೇವೆ, ದೋಷಿಗಳ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ರಾಜಸ್ಥಾನ ಆಡಳಿತಾಧಿಕಾರಿ ಸಾವು; ವೈದ್ಯಕೀಯ ನಿರ್ಲಕ್ಷ್ಯ ಎಂದ ಕುಟುಂಬ