ಕರ್ನಾಟಕ

karnataka

ETV Bharat / bharat

ಕತಾರ್​ನಿಂದ ಭಾರತೀಯರ ಬಿಡುಗಡೆಗೆ ಸಹಾಯ ಮಾಡಿದ್ದರಾ ಶಾರುಖ್ ಖಾನ್? ಎಸ್​ಆರ್​ಕೆ ಹೇಳಿದ್ದೇನು? - ಶಾರುಖ್ ಖಾನ್

ಕತಾರ್​ನಿಂದ ಭಾರತೀಯ ಅಧಿಕಾರಿಗಳನ್ನು ವಾಪಸ್ ಕರೆತರಲು ಶಾರುಖ್ ಖಾನ್ ಸಹಾಯ ಮಾಡಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

Did Shah Rukh Khan help in the release of Indians from Qatar
Did Shah Rukh Khan help in the release of Indians from Qatar

By ETV Bharat Karnataka Team

Published : Feb 13, 2024, 7:33 PM IST

ನವದೆಹಲಿ: ಕತಾರ್​ನಿಂದ ಭಾರತದ ಮಾಜಿ ನೌಕಾಪಡೆ ಅಧಿಕಾರಿಗಳನ್ನು ಬಿಡುಗಡೆ ಮಾಡುವಲ್ಲಿ ಶಾರುಖ್ ಖಾನ್ ಅವರ ಪಾತ್ರವಿದೆ ಎಂಬ ವರದಿಗಳ ಬಗ್ಗೆ ಎಸ್​ಆರ್​ಕೆ ಕಚೇರಿಯು ಸ್ಪಷ್ಟೀಕರಣ ನೀಡಿದೆ. ಈ ವಿಷಯದಲ್ಲಿ ಶಾರುಖ್ ಖಾನ್ ಅವರ ಪಾತ್ರವಿದೆ ಎಂಬ ಪ್ರತಿಪಾದನೆಗಳು ಸಂಪೂರ್ಣ ಆಧಾರರಹಿತವಾಗಿವೆ ಮತ್ತು ಈ ಯಶಸ್ವಿ ಕಾರ್ಯವು ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸಂಬಂಧಿಸಿದ್ದಾಗಿದೆ ಎಂದು ಅದು ಒತ್ತಿ ಹೇಳಿದೆ.

"ಅಲ್ಲದೆ ರಾಜತಾಂತ್ರಿಕತೆ ಮತ್ತು ರಾಜನೀತಿಯನ್ನು ಒಳಗೊಂಡ ಎಲ್ಲಾ ವಿಷಯಗಳನ್ನು ನಮ್ಮ ಅತ್ಯಂತ ಸಮರ್ಥ ನಾಯಕರು ಉತ್ತಮವಾಗಿ ನಿಭಾಯಿಸಬಲ್ಲವರಾಗಿದ್ದಾರೆ. ನೌಕಾ ಅಧಿಕಾರಿಗಳು ಸುರಕ್ಷಿತವಾಗಿ ಮನೆಗಳಿಗೆ ತಲುಪಿದ್ದಕ್ಕೆ ಇತರ ಎಲ್ಲ ಭಾರತೀಯರಂತೆ ಖಾನ್ ಕೂಡ ಸಂತೋಷಪಟ್ಟಿದ್ದಾರೆ ಮತ್ತು ಅವರಿಗೆ ಶುಭ ಹಾರೈಸುತ್ತಾರೆ" ಎಂದು ಎಸ್ಆರ್​ಕೆ ಕಚೇರಿ ತಿಳಿಸಿದೆ.

ಭಾರತದ ನೌಕಾಪಡೆ ಅಧಿಕಾರಿಗಳನ್ನು ಬಿಡಿಸಿಕೊಂಡು ಬರುವಲ್ಲಿ ಶಾರುಖ್ ಖಾನ್ ಸಹಾಯ ಮಾಡಿದ್ದಾರೆ ಎಂದು ಮಂಗಳವಾರ ಬೆಳಗ್ಗೆ ಪ್ರತಿಪಾದಿಸಿದ್ದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ, ಪ್ರಧಾನಿ ಮೋದಿ ಮಧ್ಯಪ್ರಾಚ್ಯ ದೇಶಗಳ ಪ್ರವಾಸಕ್ಕೆ ಶಾರುಖ್ ಖಾನ್ ಅವರನ್ನೂ ತಮ್ಮೊಂದಿಗೆ ಕರೆದುಕೊಂಡು ಹೋಗಬೇಕಿತ್ತು ಎಂದು ಹೇಳಿದ್ದರು.

"ವಿದೇಶಾಂಗ ಸಚಿವಾಲಯ ಮತ್ತು ಎನ್ಎಸ್ಎ ಕತಾರ್​ನ ಶೇಖ್​ಗಳನ್ನು ಮನವೊಲಿಸಲು ವಿಫಲವಾದ ನಂತರ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ಮೋದಿ ಖಾನ್ ಅವರಿಗೆ ವಿನಂತಿ ಮಾಡಿದ್ದರು. ಇದರಿಂದಾಗಿಯೇ ಕತಾರ್​ನಿಂದ ನಮ್ಮ ಅಧಿಕಾರಿಗಳನ್ನು ಬಿಡಿಸಿಕೊಳ್ಳಲು ಸಾಧ್ಯವಾಯಿತು" ಎಂದು ಸುಬ್ರಮಣಿಯನ್ ಸ್ವಾಮಿ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ವಾಮಿ ಅವರ ಈ ಹೇಳಿಕೆಯ ನಂತರ ಎಸ್​ಆರ್​ಕೆ ಕಚೇರಿ ಪ್ರತಿಕ್ರಿಯೆ ನೀಡಿದ್ದು, ಅವರ ಹೇಳಿಕೆಗಳನ್ನು ತಳ್ಳಿ ಹಾಕಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಿಗ್ಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಕತಾರ್ ಗೆ ಎರಡು ದಿನಗಳ ಅಧಿಕೃತ ಭೇಟಿಗೆ ತೆರಳಿದ್ದಾರೆ. ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸಲು ಪ್ರಧಾನಿ ಮೋದಿ ಇಂದು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಿದರು. ಇದಕ್ಕೂ ಮುನ್ನ ಅವರನ್ನು ವಿಮಾನ ನಿಲ್ದಾಣದಲ್ಲಿ ಮೊಹಮ್ಮದ್ ಬಿನ್ ಜಾಯೆದ್ ಆತ್ಮೀಯವಾಗಿ ಸ್ವಾಗತಿಸಿದರು. ಇಬ್ಬರೂ ನಾಯಕರು ಪರಸ್ಪರ ತಬ್ಬಿಕೊಂಡರು. ನಂತರ ಪ್ರಧಾನಿಗೆ ಗಾರ್ಡ್ ಆಫ್ ಹಾನರ್ ನೀಡಲಾಯಿತು.

ಇದನ್ನೂ ಓದಿ: 'ನನ್ನ ರಾಜಕೀಯ ಜೀವನದ ಹೊಸ ಆರಂಭ': ಬಿಜೆಪಿ ಸೇರಿದ ಮಾಜಿ ಸಿಎಂ ಅಶೋಕ್​ ಚವಾಣ್

ABOUT THE AUTHOR

...view details