ಹಮೀರ್‌ಪುರ(ಉತ್ತರ ಪ್ರದೇಶ):ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಕುರಾರಾ ಗ್ರಾಮದಲ್ಲಿ ದಂಪತಿಯ ನಡುವೆ ಜಗಳ ನಡೆದಿದೆ. ಈ ಸಮಯದಲ್ಲಿ ಕೋಪಗೊಂಡ ಪತಿ ಬಾವಿಗೆ ಜಿಗಿದಿದ್ದಾನೆ. ಕೂಡಲೇ ಪತ್ನಿಯೂ ಬಾವಿಗೆ ಹಾರಿ, ತನ್ನ ಗಂಡನ ಪ್ರಾಣ ರಕ್ಷಿಸಿದ್ದಾಳೆ.
ಹನ್ಸ್‌ಕುಮಾರ್ (35) ಎಂಬಾತ ಪತ್ನಿ ಸುನೀತಾ (32) ಜೊತೆಗೆ ಜಗಳವಾಡಿದ್ದಾನೆ. ಕೋಪದ ಭರದಲ್ಲಿ ಮನೆಯಿಂದ ಹೊರಗೆ ಓಡಿ ಸಮೀಪದ ಬಾವಿಗೆ ಹಾರಿದ್ದಾನೆ. ಮುಳುಗಲು ಪ್ರಾರಂಭಿಸಿದಾಗ ಪತಿ ಸಹಾಯಕ್ಕಾಗಿ ಜೋರಾಗಿ ಕಿರುಚುತ್ತಾ ಅಳಲು ಪ್ರಾರಂಭಿಸಿದ್ದ. ಬಾವಿಯ ಸುತ್ತೆಲ್ಲಾ ಜನ ಜಮಾಯಿಸಿದ್ದರು. ಆದರೆ, ಯಾರೂ ಕೂಡ ಆತನನ್ನು ರಕ್ಷಿಸುವ ಪ್ರಯತ್ನ ಮಾಡಲಿಲ್ಲ. ಗಲಾಟೆ ಕೇಳಿದ ಸುನೀತಾ ಮನೆಯಿಂದ ಹೊರಗೆ ಓಡಿ ಬಂದು ನೋಡಿದಾಗ ಪತಿ ಬಾವಿಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ.
ಈ ವೇಳೆ ತನ್ನ ಪ್ರಾಣಕ್ಕೆ ಹೆದರದೆ, ತಕ್ಷಣವೇ ಹಗ್ಗವನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು ಬಾವಿಗೆ ಇಳಿದಿದ್ದಾಳೆ. ಬಳಿಕ ಪ್ರಜ್ಞೆ ತಪ್ಪಿ ಬಿದ್ದಿದ್ದ ಪತಿಯನ್ನು ಮೇಲಕ್ಕೆತ್ತಲಾಯಿತು. ಪತಿಯನ್ನು ಹೊರಗೆಳೆಯುವವರೆಗೂ ಪತ್ನಿ ಹಗ್ಗ ಕಟ್ಟಿಕೊಂಡು ಬಾವಿಯಲ್ಲೇ ನಿಂತಿದ್ದಳು. ಬಳಿಕ ಆಕೆಯನ್ನು ಮೇಲಕ್ಕೆ ತರಲಾಯಿತು. ಈ ದಂಪತಿಗೆ ಗ್ರಾಮಸ್ಥರು ಸಹಾಯ ಮಾಡಿದರು.
''ಹನ್ಸ್‌ಕುಮಾರ್‌ನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ನೀಡಿದ ಸ್ವಲ್ಪ ಸಮಯದ ನಂತರ ಆತನಿಗೆ ಪ್ರಜ್ಞೆ ಮರಳಿ ಬಂದಿದೆ. ಸಣ್ಣ ಮೂಳೆ ಮುರಿತ ಆಗಿದ್ದು, ಆರೋಗ್ಯ ಸ್ಥಿರವಾಗಿದೆ. ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ" ಎಂದು ಕುರಾರಾ ಎಸ್‌ಎಚ್‌ಒ ಯೋಗೇಶ್ ತಿವಾರಿ ತಿಳಿಸಿದ್ದಾರೆ.
ಪತಿಯ ಪ್ರಾಣ ಉಳಿಸಿದ ಮಹಿಳೆ:ಪತಿ ಕೊಲೆಗೆ ಬಂದಿದ್ದ ನಾಲ್ವರ ಕಣ್ಣಿಗೆ ಖಾರದ ಪುಡಿ ಎರಚಿ, ಪತ್ನಿ ಪ್ರಾಣ ಉಳಿಸಿದ್ದ ಘಟನೆ ತೆಲಂಗಾಣದ ವಾರಂಗಲ್‌ನ ಶಂಭುನಿಪೇಟೆಯಲ್ಲಿ ಕಳೆದ ವರ್ಷ ಜನವರಿಯಲ್ಲಿ ನಡೆದಿತ್ತು. 'ದಿ ವಾರಂಗಲ್ ಜಿಲ್ಲಾ ಲಾರಿ ಅಸೋಸಿಯೇಶನ್' ಅಧ್ಯಕ್ಷ ವೇಮುಲಾ ಭೂಪಾಲ್ ಅವರ ಮನೆಗೆ ನಾಲ್ವರು ಆರೋಪಿಗಳು ಆಟೋದಲ್ಲಿ ಬಂದಿದ್ದರು. ಇವರಲ್ಲಿ ಮೂವರು ವೇಮುಲಾ ಮನೆಗೆ ತೆರಳಿ ಚಾಕುವಿನಿಂದ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದ್ದರು.
ತಕ್ಷಣವೇ ಎಚ್ಚೆತ್ತ ವೇಮುಲಾ ಪತ್ನಿ ಕಲ್ಯಾಣಿ ಅಡುಗೆ ಮನೆಗೆ ಓಡಿ ಹೋಗಿ ಖಾರದ ಪುಡಿ ತೆಗೆದುಕೊಂಡು ಬಂದು ದುಷ್ಕರ್ಮಿಗಳ ಕಣ್ಣಿಗೆ ಎರಚಿದ್ದಳು. ಇದೇ ಸಂದರ್ಭದಲ್ಲಿ ನಮ್ಮನ್ನು ಕಾಪಾಡಿ ಎಂದು ಜೋರಾಗಿ ಕೂಗಿಕೊಂಡಿದ್ದಳು. ಮಹಿಳೆಯ ಚೀರಾಟ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಬಂದಿದ್ದಾರೆ. ಒಬ್ಬ ಆರೋಪಿ ಕಣ್ಣಿಗೆ ಹೆಚ್ಚು ಖಾರದ ಪುಡಿ ಬಿದ್ದಿದ್ದರಿಂದ ಆತ ಅಲ್ಲಿಂದ ಪರಾರಿಯಾಗಲು ಸಾಧ್ಯವಾಗದೇ ಸಿಕ್ಕಿಬಿದ್ದಿದ್ದ. ಉಳಿದ ಮೂವರು ಆಟೋದಲ್ಲಿ ಓಡಿ ಹೋಗಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದರು. ಕಲ್ಯಾಣಿಯ ಧೈರ್ಯ ಮತ್ತು ಸಮಯ ಪ್ರಜ್ಞೆ ಪತಿಯ ಪ್ರಾಣ ಉಳಿಸಿತು.
ಇದನ್ನೂ ಓದಿ:ಕೃಷ್ಣಗಿರಿಯಲ್ಲಿ ಐವರು ಅಸ್ಸೋಂ ವಲಸೆ ಕಾರ್ಮಿಕರ ಮೇಲೆ ಗುಂಪು ದಾಳಿ: 8 ಜನರ ಬಂಧನ