ನವದೆಹಲಿ: ದಕ್ಷಿಣ ದೆಹಲಿಯ ನೆಬ್ ಸರೈನಲ್ಲಿ ದಂಪತಿ ಹಾಗೂ 23 ವರ್ಷದ ಪುತ್ರಿಯ ಭೀಕರ ಕೊಲೆ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಭೇದಿಸಿರುವ ದೆಹಲಿ ಪೊಲೀಸರು ದಂಪತಿಯ ಪುತ್ರನನ್ನು ಬುಧವಾರ ಬಂಧಿಸಿದ್ದಾರೆ.
ರಾಜ್ಯ ಮಟ್ಟದ ಬಾಕ್ಸರ್ ಅರ್ಜುನ್ ಅಲಿಯಾಸ್ ಬಂಟಿ (20) ಬಂಧಿತ ಆರೋಪಿ. ಈ ತನ್ನ ತಂದೆ ರಾಜೇಶ್ ಕುಮಾರ್ (51), ತಾಯಿ ಕೋಮಲ್ (46) ಮತ್ತು ಅಕ್ಕ ಕವಿತಾ (23) ಅವರನ್ನು ಬುಧವಾರ ನಸುಕಿನ ವೇಳೆ ಅವರ ನಿವಾಸದಲ್ಲಿ ಚಾಕುವಿನಿಂದ ಇರಿದು ಕೊಂದಿದ್ದನು ಎಂದು ಪೊಲೀಸರು ತಿಳಿಸಿದರು.
ಬುಧವಾರ ಮುಂಜಾನೆ 5.30ರ ಸುಮಾರಿಗೆ ವಾಕಿಂಗ್ ತೆರಳಿದ್ದೆ, ಅಲ್ಲಿಂದ ಹಿಂತಿರುಗಿದಾಗ ಮನೆಯಲ್ಲಿ ತಂದೆ, ತಾಯಿ ಹಾಗೂ ಅಕ್ಕನ ಶವಗಳು ಪತ್ತೆಯಾಗಿವೆ ಎಂದು ಬುಧವಾರ ಸ್ವತಃ ಅರ್ಜುನ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಜೊತೆಗೆ ತನ್ನ ಸೋದರ ಮಾವನಿಗೂ ಮನೆಯವರು ಕೊಲೆಯಾಗಿರುವ ಬಗ್ಗೆ ತಿಳಿಸಿದ್ದ. ಆದರೆ ಕೆಲವೇ ಗಂಟೆಗಳಲ್ಲಿ ಪ್ರಕರಣಕ್ಕೆ ಸ್ವಿಸ್ಟ್ ಸಿಕ್ಕಿದ್ದು, ಆತನೇ ಕೊಲೆ ಆರೋಪಿ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕೊಲೆ ಹಿಂದಿನ ಉದ್ದೇಶ:ಈ ಹಿಂದೆ ಅರ್ಜುನ್ ಅರ್ಜುನ್ ತಂದೆಯಿಂದ ನಿರಂತರ ಅವಮಾನಕ್ಕೆ ಒಳಗಾಗಿದ್ದನು. ಆ ಸಿಟ್ಟಿನಲ್ಲೇ ಅರ್ಜುನ್ ಎಲ್ಲರೂ ನಿದ್ದೆಯಲ್ಲಿರುವಾಗಲೇ ಚೂರಿಯಲ್ಲಿ ಇರಿದು ಕೊಲೆ ಮಾಡಿದ್ದಾರೆ. ಅರ್ಜುನ್ ಕ್ರೀಡಾ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿಯಿಂದ ಶಿಕ್ಷಣದಿಂದ ವಿಮುಖನಾಗಿದ್ದನು. ಅದಕ್ಕಾಗಿಯೇ ಆತನ ತಂದೆ ತಾಯಿ, ಸಾರ್ವಜನಿಕವಾಗಿಯೇ ಮಗನನ್ನು ಬೈಯ್ಯುತ್ತಿದ್ದರು. ಎರಡು ದಿನಗಳ ಹಿಂದೆ ಮಗ ತನ್ನ ಮಾತು ಕೇಳುತ್ತಿಲ್ಲವೆಂದು ತಂದೆ ಸಾರ್ವಜನಿಕವಾಗಿ ಥಳಿಸಿದ್ದರು. ಅಲ್ಲದೇ ಹೆತ್ತವರು ಆಸ್ತಿಯನ್ನು ತನ್ನ ಸಹೋದರಿಗೆ ನೀಡಲು ಉದ್ದೇಶಿಸಿರುವ ಬಗ್ಗೆ ಅರ್ಜುನ್ಗೆ ಗೊತ್ತಾಗಿತ್ತು. ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಅರ್ಜುನ್ ಪೋಷಕರ 27ನೇ ವಿವಾಹ ವಾರ್ಷಿಕೋತ್ಸವದಂದು ಕೊಲೆ ಮಾಡಲು ನಿರ್ಧರಿಸಿದ್ದ ಎಂದು ದಕ್ಷಿಣ ವಲಯದ ಜಂಟಿ ಪೊಲೀಸ್ ಆಯುಕ್ತ ಎಸ್.ಕೆ. ಜೈನ್ ತಿಳಿಸಿದರು.
ಅರ್ಜುನ್ ತನ್ನ ತಂದೆಯ ಆರ್ಮಿ ಚಾಕುವಿನಿಂದ ಮೊದಲು ನೆಲಮಹಡಿಯಲ್ಲಿ ಮಲಗಿದ್ದ ಸಹೋದರಿಯಲ್ಲಿ ಇರಿದು, ನಂತರ ಮೊದಲ ಮಹಡಿಗೆ ತೆರಳಿ ಅಲ್ಲಿ ಹಾಸಿಗೆ ಮೇಲೆ ಒಬ್ಬನೇ ಮಲಗಿದ್ದ ತಂದೆಯನ್ನು ಕೊಂದಿದ್ದಾನೆ. ನಂತರ ಬೊಬ್ಬೆ ಹಾಕಲು ಯತ್ನಿಸಿದ ಅಲ್ಲೇ ಇದ್ದ ತಾಯಿಯನ್ನೂ ಇರಿದು ಸಾಯಿಸಿದ್ದಾನೆ ಎಂದು ಮಾಹಿತಿ ನೀಡಿದರು.
ಅರ್ಜುನ್ ಮಾವ ಹೇಳಿದ್ದೇನು?ನನ್ನ ಸಹೋದರಿಯ ಕುಟುಂಬ ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ. ಸರಳವಾಗಿ ಹಾಗೂ ಶಾಂತಿಯುತವಾಗಿ ಜೀವನ ಸಾಗಿಸುತ್ತಿದ್ದರು. ರಾಜೇಶ್ ನನ್ನ ಭಾವ. ನನ್ನ ಸೋದರಳಿಯ ಅರ್ಜುನ್ನಿಂದ ಕೊಲೆಯಾಗಿರುವ ಬಗ್ಗೆ ಕರೆ ಬಂದಿತ್ತು. ರಾಜೇಶ್ ಸೇನೆಯಿಂದ ನಿವೃತ್ತಿ ಹೊಂದಿದ್ದು, ಪ್ರಸ್ತುತ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಮಗಳು ಕಾಲೇಜು ವಿದ್ಯಾರ್ಥಿನಿಯಾಗಿದ್ದು, ಸಮರ ಕಲೆಯಲ್ಲಿ ಬ್ಲ್ಯಾಕ್ ಬೆಲ್ಟ್ ಹೊಂದಿದ್ದಳು.
ಪೊಲೀಸರು ಪ್ರಕರಣವನ್ನು ಭೇದಿಸಿದ್ದು ಹೇಗೆ?ಕೊಲೆಯಾಗಿರುವುದರ ಬಗ್ಗೆ ಅರ್ಜುನ್ ಮಾಹಿತಿ ನೀಡಿದ ತಕ್ಷಣ, ಫಾರೆನ್ಸಿಕ್ ತಜ್ಞರು, ಅಪರಾಧ ತಂಡ, ಸ್ನಿಫರ್ ಡಾಗ್ಗಳ ಸಹಾಯದಿಂದ ಅಪರಾಧ ಸ್ಥಳಕ್ಕೆ ತೆರಳಿದ ಪೊಲೀಸರು ತನಿಖೆ ಆರಂಭಿಸಿದರು. ಇದು ದರೋಡೆ ಅಥವಾ ಕಳ್ಳತನದ ಪ್ರಕರಣವಲ್ಲವಾದ್ದರಿಂದ ಆ ಆಯಾಮಗಳನ್ನು ಬಿಟ್ಟು ಪೊಲೀಸರು ತನಿಖೆ ಕೈಗೊಂಡಿದ್ದರು. ವಿಚಾರಣೆ ವೇಳೆ ಅರ್ಜುನ್ ನೀಡುತ್ತಿದ್ದ ಉತ್ತರದಲ್ಲಿ ಅನುಮಾನ ಮೂಡಿದೆ. ಆಗ ಪೊಲೀಸರು ಅರ್ಜುನ್ ಅನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ತನಿಖಾಧಿಕಾರಿಗಳನ್ನು ವಂಚಿಸುವ ಪ್ರಯತ್ನದಲ್ಲಿದ್ದ ಅರ್ಜುನ್, ಕೊನೆಗೆ ವೈಯಕ್ತಿಕ ದ್ವೇಷದಿಂದ ಪ್ಲಾನ್ ಮಾಡಿ ಮನೆಯವರನ್ನು ಕೊಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ದಕ್ಷಿಣ ವಲಯದ ಜಂಟಿ ಪೊಲೀಸ್ ಆಯುಕ್ತ ಎಸ್.ಕೆ. ಜೈನ್ ಮಾಹಿತಿ ನೀಡಿದರು.
ಕುಟುಂಬದ ಹಿನ್ನೆಲೆ:ರಾಜೇಶ್ ಕುಮಾರ್ ಹಾಗೂ ಅವರ ಪತ್ನಿ ಕೋಮಲ್ ಮೂಲತಃ ಹರಿಯಾಣದ ನಿವಾಸಿಗಳು. ಮಕ್ಕಳ ಶಿಕ್ಷಣ ಹಾಗೂ ಜೀವನಶೈಲಿಯ ದೃಷ್ಟಿಯಿಂದ 2009ರಲ್ಲಿ ರಾಷ್ಟ್ರ ರಾಜಧಾನಿಗೆ ಸ್ಥಳಾಂತರಗೊಂಡಿದ್ದರು.
ಇದನ್ನೂ ಓದಿ:ಒಂದೇ ಕುಟುಂಬದ ಮೂವರನ್ನು ಇರಿದು ಹತ್ಯೆ ಮಾಡಿದ ಅಪರಿಚಿತ: ಬೆಚ್ಚಿ ಬಿದ್ದ ಮಹಾನಗರಿ ಜನ