ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ (AAP) ಭರಪೂರ ಘೋಷಣೆಗಳನ್ನು ಹೊರಡಿಸುತ್ತಿದೆ. ಈಗಾಗಲೇ ಇರುವ ಉಚಿತಗಳ ಮುಂದುವರಿಕೆ, ಹಿರಿಯ ನಾಗರಿಕರಿಗೆ ಪಿಂಚಣಿ ಪುನಾರಂಭದ ಭರವಸೆ ನೀಡಿದೆ. ಇದೀಗ ಆಟೋ ಚಾಲಕರಿಗೆ 10 ಲಕ್ಷ ರೂಪಾಯಿ ಆರೋಗ್ಯ ವಿಮೆ ನೀಡುವುದಾಗಿ ಪ್ರಕಟಿಸಿದೆ.
ಪಕ್ಷದ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮಂಗಳವಾರ ಈ ಪ್ರಕಟಣೆ ಮಾಡಿದ್ದು, ನಗರದ ನೋಂದಾಯಿತ ಆಟೋ ಚಾಲಕರಿಗೆ 10 ಲಕ್ಷ ರೂಪಾಯಿ ಆರೋಗ್ಯ ವಿಮೆ ನೀಡಲಾಗುವುದು. ಸಮವಸ್ತ್ರ ಭತ್ಯೆಯಾಗಿ ವರ್ಷಕ್ಕೆ ₹5 ಸಾವಿರ ನೀಡುವುದಾಗಿ ಘೋಷಿಸಿದರು.
ಕೊಂಡ್ಲಿ ಕ್ಷೇತ್ರದಲ್ಲಿ ಆಟೋ ಚಾಲಕನ ಕುಟುಂಬ ಸದಸ್ಯರೊಂದಿಗೆ ಭೋಜನ ಸವಿದ ಕೇಜ್ರಿವಾಲ್, ಆಟೋ ಚಾಲಕರ ಆರೋಗ್ಯಕ್ಕೆ ಆದ್ಯತೆ ನೀಡಲಾಗುವುದು. ಸಮವಸ್ತ್ರ ಭತ್ಯೆಯಾಗಿ ವರ್ಷಕ್ಕೆ ಎರಡು ಬಾರಿ 2,500 ರೂಪಾಯಿ ಸರ್ಕಾರ ನೀಡಲಿದೆ. ಆಟೋ ಚಾಲಕರ ಮಕ್ಕಳಿಗೆ ಉಚಿತ ತರಬೇತಿ ಕೊಡಿಸಲಾಗುವುದು ಎಂದು ಇದೇ ವೇಳೆ ಆಶ್ವಾಸನೆ ನೀಡಿದರು.
ಮದುವೆಗೆ ₹1 ಲಕ್ಷ ನೆರವು:ಇದಲ್ಲದೇ, ಆಟೋ ಚಾಲಕರ ಕುಟುಂಬದ ಹೆಣ್ಣು ಮಕ್ಕಳ ವಿವಾಹಕ್ಕೆ ಸರ್ಕಾರದಿಂದ 1 ಲಕ್ಷ ರೂಪಾಯಿ ನೆರವು ಸಿಗಲಿದೆ. ಆಟೋ ಪ್ರಯಾಣದ ಬುಕಿಂಗ್ಗಾಗಿ 'ಪೂಚೋ' ಆ್ಯಪ್ ಅನ್ನು ಮರುಪ್ರಾರಂಭಿಸುವುದಾಗಿ ಭರವಸೆ ನೀಡಿದರು.