ನವದೆಹಲಿ:ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಕ್ಷದ ಬಲವು ದೇಶದ ಬಲಕ್ಕೆ ಸಮಾನ ಎಂದು ಹೇಳಿದ್ದಾರೆ. ದೆಹಲಿಯ ಜನರು ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ಅಡಿಯಲ್ಲಿ ಆಡಳಿತ ಅನುಭವಿಸಿದ್ದಾರೆ. ಈ ಆಡಳಿತಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಅವರಿಗೆ ತಿಳಿದಿದೆ ಎಂದಿದ್ದಾರೆ.
ದೆಹಲಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್‌ನ ಬಲವು ದೇಶದ ಬಲ ಎಂದು ಎಲ್ಲರಿಗೂ ತಿಳಿದಿದೆ. ಈ ಹಿಂದೆ ಶೀಲಾ ದೀಕ್ಷಿತ್ ತಮ್ಮ ಅಧಿಕಾರಾವಧಿಯಲ್ಲಿ ಮಾದರಿ ಆಡಳಿತ ನಡೆಸಿದ್ದರು. ಅವರು ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದರು, ದ್ವೇಷದ ರಾಜಕೀಯವನ್ನು ಎಂದಿಗೂ ಮಾಡಲಿಲ್ಲ. ದೆಹಲಿಗೆ ಬದಲಾವಣೆ ಬೇಕು, ದೆಹಲಿಯನ್ನು ಉಳಿಸಲು ಕಾಂಗ್ರೆಸ್ ಅವಶ್ಯಕತೆಯಿದೆ" ಎಂದು ಡಿಕೆಶಿ ತಿಳಿಸಿದರು.
"ಕೇಜ್ರಿವಾಲ್ ಅವರೇ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಎಎಪಿ ಕೂಡ ಚುನಾವಣೆಯಲ್ಲಿ ಸೋಲಲಿದೆ. ನೀವು 10 ವರ್ಷಗಳ ಕಾಲ ಅಧಿಕಾರದಲ್ಲಿದ್ದೀರಿ. ಆದರೆ ನೀವು ಮಾತನಾಡಲು ಏನೂ ಇಲ್ಲ, ಇಂದಿಗೂ ನೀವು ಟೀಕಿಸುವುದರಲ್ಲೇ ನಿರತರಾಗಿದ್ದೀರಿ. ನೀವು ಏನು ಮಾಡಿದ್ದೀರೆಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಚುನಾವಣೆಯಲ್ಲಿ ಸೋಲುತ್ತಾರೆಂದು ಎಎಪಿ ಅವರಿಗೆ ತಿಳಿದಿದ್ದು, ಹೀಗಾಗಿ ತೀವ್ರ ಅಸಮಾಧಾನದಲ್ಲಿದ್ದಾರೆ. ಇದು ಸೋಲಿನ ಭಯ. ಬಿಜೆಪಿ ಮತ್ತು ಕಾಂಗ್ರೆಸ್ ಎಂದಿಗೂ ಒಂದಾಗಲು ಸಾಧ್ಯವಿಲ್ಲ ಎಂದು ಈ ದೇಶದ ಮಗುವಿಗೂ ಕೂಡ ತಿಳಿದಿದೆ" ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.